ಮಾಧ್ಯಮದ ಟಿಸಿಲು ಎಷ್ಟೇ ಹುಲುಸಾಗಿ ಹರಡಿಕೊಂಡರೂ, ಜೀವತಂತು ಮಾತ್ರ ಅದೇ ಇರುವುದು ಮಾಧ್ಯಮದ ಮತ್ತೊಂದು ಶಕ್ತಿಯೂ ಹೌದು, ಹಾಗಾಗಿ ಆಧುನಿಕ ಮಾಧ್ಯಮವನ್ನು ಪ್ರವೇಶ ಮಾಡುವವರು ಅದರ ಮೂಲಕ ಇಳಿದಾಗಲೇ ಮಾಧ್ಯಮದ ಪರಿಭಾಷೆ, ಪದರುಗಳು ದಕ್ಕುತ್ತವೆ. ಅಂತಹ ಪ್ರವೇಶಿಕೆಗೆ ನೆರವಾಗುವಂತಹ ಅನೇಕ ಲೇಖನಗಳ ಒಟ್ಟು ಗುಚ್ಛವೇ "ಲಾಜಿಕ್ ಬಾಕ್ಸ್' ಕೃತಿ. ಭಾರತದಲ್ಲಿ ದೂರದರ್ಶನಕ್ಕೆ ಅದರದ್ದೇ ಇತಿಹಾಸವಿದೆ. ಅದರಲ್ಲೂ ಕರ್ನಾಟಕಕ್ಕೆ ಟೀವಿ ಬಂದಾಗ ಅದನ್ನು ನೋಡಿದ ರೀತಿಯೇ ವಿಚಿತ್ರವಾಗಿತ್ತು. ಕೇಬಲ್ ಟಿವಿಷನ್ ಬಂದ ನಂತರ ಅದು ಪಡೆದುಕೊಂಡ ವೇಗ ಇನ್ನೂ ಅದ್ಭುತ, ಈ ಎಲ್ಲ ಅಪರೂಪದ ದಾಖಲೆಗಳನ್ನು ಈ ಪುಸ್ತಕದಲ್ಲಿ ಲೇಖಕರು ದಾಖಲಿಸುತ್ತಾ ಹೋಗಿದ್ದಾರೆ. ಇತಿಹಾಸದ ಜೊತೆ ಜೊತೆಗೆ ಕೇಬಲ್ ಟಿವಿ ನೆಟ್‌ವರ್ಕ್ ಕಲ್ಪಿಸಿದ್ದ ಉದ್ಯೋಗಗಳು ಮತ್ತು ದೇಶಿಯ ಮಾರುಕಟ್ಟೆಯ ಏರಿಳಿತದ ನಡುವೆ ವಿವಿಧ ಉದ್ಯಮಗಳ ಸ್ಥಿತಿಗತಿಗಳನ್ನೂ ಅವಲೋಕಿಸಿದ್ದಾರೆ. ಶ್ರೀಧರ ಬನವಾಸಿ ಅವರು ಮಾಧ್ಯಮ (ಪತ್ರಿಕೆ ಮತ್ತು ವಿದ್ಯುನ್ಮಾನ) ಕ್ಷೇತ್ರದಲ್ಲಿ ದುಡಿದದ್ದು ಕಡಿಮೆ. ಆದರೆ, ಈ ಕ್ಷೇತ್ರದಲ್ಲಿ ಇದ್ದಷ್ಟು ಹೊತ್ತು ಅವರು ಪ್ರತಿದಿನದ ಬೆರಗನ್ನು ಅನುಭವಿಸಿದ್ದಾರೆ ಎನ್ನುವುದು ಕೃತಿಯ ಒಂದೊಂದು ಲೇಖನವೂ ಅರ್ಥ ಮಾಡಿಸುತ್ತಾ ಹೋಗುತ್ತದೆ. ಒಂದೊಂದು ಲೇಖನದಲ್ಲೂ ಅವರು ಕೊಟ್ಟ ಪುರಾವೆಗಳು ಸಂಶೋಧಕರ ಹುಡುಕಾಟವನ್ನು ಕಡಿಮೆ ಮಾಡಿಸುತ್ತವೆ. ಅಷ್ಟೊಂದು ಮಾಹಿತಿಗಳನ್ನು ಅವರು ಪ್ರತಿ ಲೇಖನದಲ್ಲೂ ಕೊಡುತ್ತಾ ಹೋಗಿದ್ದಾರೆ. ಇದೇ ಈ ಕೃತಿಯ ಹೆಚ್ಚುಗಾರಿಕೆ, ಟೆಲಿವಿಷನ್ ಲೋಕದಲ್ಲಿ ನಡೆದ ಭರಾಟೆಗಳು ಒಂದಾ, ಎರಡಾ? ನೋಡಲು ಪುಟ್ಟದಾಗಿ ಕಾಣಿಸುವ ಎಲೆಕ್ಟ್ರಾನಿಕ್ ವಸ್ತುವಿನ ಸುತ್ತಲೂ ನಾನಾ ಕಥೆಗಳಿವೆ. ಆ ಕಥೆಗಳಿಂದ ಹುಟ್ಟಿಕೊಂಡ ಉಪಕಥೆಗಳು ಇವೆ, ವಾದ, ವಿವಾದ, ಮೋಸ, ಕ್ರೈಮ್ ಹೀಗೆ ಏನೆಲ್ಲ ವಿಷಯಗಳನ್ನು ಇದು ಒಳಗೊಂಡಿದೆ. ಈ ಎಲ್ಲವನ್ನೂ ಒಂದೇ ಗುಕ್ಕಿಗೆ ಸಿಗುವಂತೆ ಈ ಕೃತಿಯ ಲೇಖಕರು ಹಿಡಿದಿಟ್ಟಿದ್ದಾರೆ ಎಂದು ಲೇಖಕ ಶರಣು ಹುಲ್ಲೂರು ಬೆನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.