‘ಕನ್ನಡ ವಾಣಿಜ್ಯ ಸಂವಹನ’ ಡಾ. ಮುಮ್ತಾಜ್ ಬೇಗಂ ರವರ ಕನ್ನಡ ಸಾಮಾನ್ಯ ಪಠ್ಯ ಪುಸ್ತಕವಾಗಿದೆ. ಕೃತಿಯ ಕುರಿತು ಲೇಖಕರು ಹೀಗೆ ಹೇಳಿದ್ದಾರೆ; ನಗದು ರಹಿತ ವಹಿವಾಟನ್ನು ಅಭಿವೃದ್ಧಿ ಪಡೆಸುತ್ತಿರುವ ದಿನಗಳಲ್ಲಿ ಡಿಜಿಟಲ್ ಪದ್ಧತಿ ಎಂದರೆ ಸೈಪಿಂಗ್ ಮೆಶೀನ್, ಚೆಕ್, ನೆಟ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ವ್ಯಾಪಾರ ವಹಿವಾಟನ್ನು ಪ್ರೋತ್ಸಾಹಿಸುತ್ತಿರುವ ಪ್ರಸ್ತುತದಲ್ಲಿ ತಂತ್ರಜ್ಞಾನದ ಬಳಕೆ ಇಂದು ಮನುಷ್ಯನ ಮೂಲಭೂತ ಅವಶ್ಯಕತೆಗಳಂತೆ ಪರಿಣಮಿಸುತ್ತಿದೆ. ಎಲ್ಲಾ ಜ್ಞಾನ ಶಿಸ್ತುಗಳಿಗೂ ಮಾರ್ಗಸೂಚಿಯಾಗಿ ಬೆಳಕನ್ನು ತೋರುವ ಭಾಷೆ ಪ್ರಮುಖ ಸಂವಹನ ಮಾಧ್ಯಮವಾಗಿದೆ. ಮಾನವನ ಬದುಕಿಗೆ ಭಾಷೆ ಬಹು ಮುಖ್ಯ ಸಾಧನ. ಮನುಷ್ಯ ಮಾತಿಗೆ ಕೊಟ್ಟ ಶಿಷ್ಟ ಪದ ರೂಪವೇ 'ಭಾಷೆ'. ತಂತ್ರಜ್ಞಾನವೆನ್ನುವುದು ಆಯಾ ಕಾಲದ ಬದುಕಿನ ಶೋಧರೂಪ, ವ್ಯವಹಾರ, ಆಧುನಿಕತೆ ಎನ್ನುವುದು ಸಮಕಾಲೀನ ಸ್ವರೂಪ, ಭಾಷೆ, ವ್ಯವಹಾರ, ತಂತ್ರಜ್ಞಾನ ಸಂಬಂಧಾಂತರಗಳನ್ನು ಚಿಂತನೆಗೆ ಒಳಮಾಡುವ ಪೂರಕ ಮತ್ತು ಪ್ರತಿಕೂಲಾತ್ಮಕ ಅಂಶವೆರಡನ್ನು ಕಾಣುತ್ತೇವೆ. ಭಾಷೆಯೊಂದು ತಂತ್ರಜ್ಞಾನ ವ್ಯವಹಾರಕ್ಕೆ ಎದುರಾಗಿರುವ, ಸಂವಾದಿಸುವ, ಸನ್ನಿವೇಶ ಮತ್ತು ಸ್ವರೂಪದಲ್ಲಿ ಉತ್ತರಗಳನ್ನು ಹುಡುಕಬೇಕಾಗಿದೆ. ಡಿಜಿಟಲ್ ಎಜ್ಯುಕೇಷನ್, ಡಿಜಿಟಲ್ ವಿಡಿಯೋ, ಡಿಜಿಟಲ್ ಲೈಬ್ರರಿ, ಡಿಜಿಟಲ್ ಸಿನೆಮಾ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಮೊಬೈಲ್, ಡಿಜಿಟಲ್ ಇಂಡಿಯಾದಂತಹ ಸಮಕಾಲೀನ ಬದುಕು, ಅಭಿರುಚಿ, ಅಭಿವೃದ್ಧಿ ಚಿಂತನೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಅನಿವಾರ್ಯತೆಯ ಕಾಲ ಸಂದರ್ಭದಲ್ಲಿ ನಿಂತಿದ್ದೇವೆ. ವ್ಯವಹಾರಿಕ ಜಗತ್ತಿನಲ್ಲಿ ಕನ್ನಡದ ಬಳಕೆಗೆ ಸಂಬಂಧಿಸಿದಂತೆ ಹೊಸದೊಂದು ಸವಾಲನ್ನು ಎದುರಿಸುತ್ತಿದ್ದೇವೆ. ಕನ್ನಡ ಭಾಷೆಯ ಅಳಿವು-ಉಳಿವಿನ ಆತಂಕ ಒಂದೆಡೆ ; ಕನ್ನಡ ಹೊಸ ಹೊಸ ಸಾಧ್ಯತೆಗಳತ್ತ ಮುಖ ಮಾಡುತ್ತಿರುವುದು ಇನ್ನೊಂದೆಡೆ. ಈ ನೆಲೆಗಳಲ್ಲಿ ಸಮಕಾಲೀನ ಅಗತ್ಯಗಳನ್ನು ಪೂರೈಸಬಲ್ಲ ವ್ಯವಹಾರಿಕ ರೂಪಗಳು ಮೈದಳೆದಿವೆ. ಹಿಂದೆ ಇದ್ದ ಅದೇಷ್ಟೋ ವ್ಯವಹಾರಿಕ ಮಾದರಿಗಳು ಅಪ್ರಸ್ತುತವೆನಿಸಿವೆ. ಇದನ್ನೆಲ್ಲಾ ಗಮನಿಸಿ ವ್ಯವಹಾರದ ನವೀನ ಮಾದರಿಗಳನ್ನು ವಿವೇಚಿಸುವ ನೆಲೆಯಲ್ಲಿ "ಕನ್ನಡ ವಾಣಿಜ್ಯ ಸಂವಹನ" ಪಠ್ಯವನ್ನು ರಚಿಸಲಾಗಿದೆ ಎಂದಿದ್ದಾರೆ.
©2024 Book Brahma Private Limited.