About the Author

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು.

ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ಇಂಟರ್ ಮೀಡಿಯೇಟ್ ಕಾಲೇಜುಗಳಲ್ಲಿ (1928-58) ರವರೆಗೆ ಅಧ್ಯಾಪಕರಾಗಿ, ವಿಭಾಗದ  ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಅನಂತರ ಒಂದೆರಡು ವರ್ಷ ಆಕಾಶವಾಣಿಯಲ್ಲಿ ಭಾಷಣ ವಿಭಾಗದ ಮುಖ್ಯಸ್ಥರಾಗಿ ಅನಂತರ ಹೊನ್ನಾವರದ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ 4 ವರ್ಷ ಕಾರ್ಯನಿರ್ವಹಿಸಿದರು.

ಪ್ರಬುದ್ಧ ಕರ್ನಾಟಕದ ಸಂಪಾದಕ (1943-48), ಕನ್ನಡ ನುಡಿ 1936-1942), ೧೯೫೫-೫೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ (1955-56) ಸಂಪಾದಕರಾಗಿದ್ದರು. ‘ಕವಿಕಾವ್ಯ ಪರಂಪರೆ’ ಕಾವ್ಯ ಮಾಲೆಗೆ ಸಂಪಾದಕ (1970)ರಾಗಿದ್ದರು.

36ನೇ ಕನ್ನಡ ಸಾಹಿತ್ಯ ಸಮ್ಮೇಳನ (1953) ಅಧ್ಯಕ್ಷತೆ ಗೌರವ ಇವರಿಗೆ ಪ್ರಾಪ್ತವಾಗಿತ್ತು. ಮುಂಬಯಿ ಪ್ರಾಂತ ಭಾಷಾ ಸಮ್ಮೇಳನ (1954)ಕ್ಕೆ ಅಧ್ಯಕ್ಷರಾದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ‘ಅರಲು ಬರಲು’ ಕವನ ಸಂಕಲನಕ್ಕೆ  ದೊರಕಿತು. ಇವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ (1976) ನೀಡಿತು. ಕೃಷ್ಣಚಾರಿತ್ರ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978) ಲಭಿಸಿತು. 1983ರ ಸೆಪ್ಟೆಂಬರ್ 4ರಂದು ನಿಧನರಾದರು.

ಅವರ ಕೆಲವು ಕೃತಿಗಳು

ಗೀತಗಳು, ದೀಪಗಳು, ನೆಳಲು ಬೆಳಕು, ಅರಲು-ಬರಲು ಮೊದಲಾದ ಕವನಸಂಗ್ರಹಗಳನ್ನೂ, ಪಂಪಾಯಾತ್ರೆ, ಹಣ ಪ್ರಪಂಚ, ಶ್ರೀಶೈಲಶಿಖರ, ವಾಲ್ಮೀಕಿ ರಾಮಾಯಣ, ಹಿರಿಯರು ಗೆಳೆಯರು, ಸಂವಿಧಾನ ಕಾನೂನು ಮೊದಲಾದ ಗದ್ಯಕೃತಿಗಳನ್ನೂ, ಪಂಜೆ ಮಂಗೇಶರಾವ್, ತ್ಯಾಗರಾಜ, ಬಂಗಾಳಿ ಸಾಹಿತ್ಯ ಚರಿತ್ರೆ, ಪುರಂದರದಾಸ, ಪಿಗ್ಮೇಲಿಯನ್ ಮೊದಲಾದ ಕೃತಿಗಳ ಅನುವಾದಗಳನ್ನು ಮಾಡಿರುವ ವಿ.ಸೀ. ಅವರು ಡಿ.ವಿ. ಗುಂಡಪ್ಪ, ಪಂಜೆ, ಕೆ. ವೆಂಕಟಪ್ಪ ಮೊದಲಾದವರ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದರು.

ವಿ. ಸೀತಾರಾಮಯ್ಯ

(02 Oct 1899-04 Sep 1983)

Awards

ABOUT THE AUTHOR