ಶ್ರೀಮತಿ ಡಾ. ಟಿ.ಎನ್.ನಾಗರತ್ನ ಇವರು ಹರಿದಾಸ ಸಾಹಿತ್ಯದಲ್ಲಿ ಮಹತ್ವದ ಹೆಸರು. 35 ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರಿನಲ್ಲಿ, ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಕೀರ್ತನೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ನಾಗರತ್ನರವರು ಹುಟ್ಟಿದ್ದು ಮಧ್ಯಪ್ರದೇಶದ ಸಿಯೋನಿಯಲ್ಲಿ 1945 ಮೇ 29ರಂದು. 1965ರಲ್ಲಿ ಪ್ರಥಮದರ್ಜೆ, ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಪಡೆದ ಬಿ.ಎ. ಪದವಿ. ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ. ಇಲ್ಲೂ ಕೂಡ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಗಳಿಸಿದ ಪದವಿ. 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದಾಗ ಡಾ. ಜಿ. ವರದರಾಜರಾಯರ ಮಾರ್ಗದರ್ಶನದಲ್ಲಿ ‘ಹರಿದಾಸರ ಭಕ್ತಿ ಸ್ವರೂಪ’ ಪ್ರೌಢ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಗೌರವಕ್ಕೂ ಪಾತ್ರರಾಗಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ 2003ರಲ್ಲಿ ನಿವೃತ್ತಿ ಪಡೆದರು. ಇವರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳೆಂದರೆ “ಶ್ರೀ ಗೋಪಾಲದಾಸರ ಕೃತಿಗಳು, ಶ್ರೀ ವಾದಿರಾಜರ ಕೃತಿಗಳು, ಶ್ರೀವಾದಿರಾಜರ ದೀರ್ಘಕೃತಿಗಳು, ಶ್ರೀ ಜಗನ್ನಾಥ ದಾಸರ ಕೃತಿಗಳು, ಶ್ರೀ ವ್ಯಾಸರಾಯರ ಕೃತಿಗಳು, ಹರಪನಹಳ್ಳಿ, ಭೀಮಪ್ಪನವರ ಹಾಡುಗಳು, ಶ್ರೀ ರಾಮದಾಸರ ಕೃತಿಗಳು, ದಾಸ ಸಾಹಿತ್ಯ ವೈಭವ, ದಾಸ ಸಾಹಿತ್ಯದ ಪ್ರಸ್ತುತತೆ, ಹರಿದಾಸ ಸಾಹಿತ್ಯ ಉಗಮ”. ಸಾಹಿತ್ಯ-ಸಂಗೀತ, ಶ್ರೀ ವಾದಿರಾಜರ ಕೃತಿಗಳು, ಕನಕದಾಸರು, ಕೀರ್ತನಕಾರರು, ಹರಿದಾಸ ವಾಙ್ಮಯ, ಹರಿದಾಸರ ಸೂಕ್ತಿಗಳು, ಹರಿದಾಸ ಸಾಹಿತ್ಯ ದರ್ಪಣ, ಸಿರಿಗಂಗಾಜನಕ ಕೀರ್ತನ ಕುಸುಮಾಂಜಲಿಯಲ್ಲದೆ ಇವರ ಪ್ರೌಢ ಪ್ರಬಂಧ ಹರಿದಾಸರ ಭಕ್ತಿಸ್ವರೂಪವೂ ಸೇರಿ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಇವರ ಹರಿದಾಸ ಸಾಹತ್ಯದ ಬಹುಮುಖ ಕೊಡುಗೆಗೆ ಶ್ರೀ ವಾದಿರಾಜರ ಕೃತಿಗಳು ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಆಕಾಡಮಿಯ ಉತ್ತಮ ಸಂಪಾದನ ಕೃತಿ ಬಹುಮಾನ , ಹಲವಾರು ವಿಶ್ವವಿದ್ಯಾಲಯಗಳ ಅಧ್ಯಯನ ಪೀಠ, ಧಾರ್ಮಿಕ ಸಂಸ್ಥೆಗಳು, ಹರಿದಾಸ ತತ್ತ್ವಜ್ಞಾನ ಸಮ್ಮೇಳನಗಳು, ಹರಿದಾಸರ ಸಂಸ್ಮರಣೋತ್ಸವಗಳು, ಹರಿದಾಸದ ಶತಮಾನೋತ್ಸವಗಳು ಮುಂತಾದವುಗಳಿಂದ ಸನ್ಮಾನಿತರಾಗಿರುವುರಲ್ಲದೆ ಕರ್ನಾಟಕ ಸರಕಾರದ 2009ನೇ ಸಾಲಿನ ಪ್ರತಿಷ್ಠಿತ ‘ಕನಕಶ್ರೀ ಪ್ರಶಸ್ತಿ’ಯ ಗೌರವಕ್ಕೂ ಪಾತ್ರರಾಗಿದ್ದಾರೆ.