ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಖೈನೂರರಲ್ಲಿ 1967ರಲ್ಲಿ ಜನಿಸಿದ ಶಿವಾನಂದ ಬಂಟನೂರರು ಚಿತ್ರ ಕಲೆಗೆ ಸಂಬಂಧಿಸಿದಂತೆ ಎ.ಎಂ., ಜಿ.ಡಿ (ಆರ್)ಗಳಲ್ಲದೆ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಂಶೋಧನಾ ಅನುದಾನ ಪಡೆದು 2002ರಲ್ಲಿ 'ಕರ್ನಾಟಕ ಜನಪದ ಶಿಲ್ಪಕಲೆ' ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮೂಲತ ಕಲಾವಿದರಾದ ಬಂಟನೂರ ಅವರು ಬೆಂಗಳೂರಿನ ವೆಂಕಟಪ್ಪ ಕಲಾಶಾಲೆ ಸೇರಿದಂತೆ ಹಲವಾರು ಕಡೆಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನೂ ಪೂನಾ, ಗೋವ ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಕಡೆ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆಯ ಸ್ನಾತಕೋತ್ತರ ವ್ಯಾಸಂಗದಲ್ಲಿ ಪ್ರಥಮ ಬ್ಯಾಂಕ್ ಪಡೆದಿದ್ದಕ್ಕೆ “ಚಿನ್ನದ ಪದಕ” ಪ್ರಶಸ್ತಿಯಲ್ಲದೆ, ರಾಜ್ಯ ಲಲಿತಕಲಾ ಅಕಾಡೆಮಿ ಹಾಗೂ ಇನ್ನಿತರ ಸಂಸ್ಥೆಗಳಿಂದ ಕೃತಿಗಳಿಗೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಜ್ಯ ಮಟ್ಟದ ನಾಲ್ಕಾರು ಕಲಾಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
ಸಾಹಿತ್ಯಾತ್ಮಕವಾಗಿ ಚಿತ್ರ ಶಿಲ್ಪ ಕುರಿತ ಮುವತ್ತಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಆಕಾಶವಾಣಿಗೆ ಕಲೆಯನ್ನು ಕುರಿತು ಭಾಷಣಗಳನ್ನು ನೀಡಿರುವುದಲ್ಲದೆ, ರಾಜ್ಯ ಲಲಿತ ಕಲಾ ಅಕಾಡೆಮಿಯ ವತಿಯಿಂದ ಉತ್ತರ ಕರ್ನಾಟಕ ಭಾಗದ ಒಂಬತ್ತು ಮಂದಿ ಕಲಾವಿದರ ಸಂದರ್ಶನ ಮಾಡಿದ್ದು ಚಿತ್ರ ಸುರಳಿಯಾಗಿ (ವಿಡಿಯೋ) ರೂಪಿಸಿಕೊಟ್ಟಿದ್ದಾರೆ. ಪತ್ರಿಕೆಯೊಂದರ ಸಂಪಾದನಾ ಕಾರ್ಯವೂ ಸೇರಿದಂತೆ ನೆನಪಿನ ಸಂಚಿಕೆಗಳ ಸಂಪಾದನೆ ಮಾಡಿದ್ದು ಕವಿತಾ ಸಂಗ್ರಹವೊಂದ ಪ್ರಕಟವಾಗಿದೆ. ಪಿಎಚ್.ಡಿ. ನಿಬಂಧ ಹಾಗೂ ಲೇಖನಗಳ ಸಂಗ್ರಹಗಳು ಮುದ್ರಣ ಹಂತದಲ್ಲಿವೆ. ಶ್ರೀಯುತರ ಕಲಾಕೃತಿಗಳು ಗದಗ, ಧಾರವಾಡ, ಗುಲಬರ್ಗ, ಹಂಪಿ, ಬೆಂಗಳೂರು ಇತ್ಯಾದಿ ಕಡೆಯ ಕಲಾ ಸಂಸ್ಥೆಗಳಲ್ಲಿ ಸಂಗ್ರಹಿತಗೊಂಡಿವೆ.
ಡಾ. ಶಿವಾನಂದ ಬಂಟನೂರ ಅವರು ಮೊದಲಿಗೆ ಧಾರವಾಡದ ಸೃಜನ ಕಲಾಸಂಸ್ಥೆಯ ಲಲಿತಕಲಾ ಮಹಾವಿದ್ಯಾಲಯ ನಂತರ ಕಲಬುರ್ಗಿಯ ಐಡಿಯಲ್ ಫೈನ್ ಆಲ್ಸ್ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿದ್ದು ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತ ಕಲಾ ನಿಕಾಯದ ದೃಶ್ಯ ಕಲಾವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಶಿವಾನಂದ ಅವರು ಗುಲ್ಬರ್ಬ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.