About the Author

ಪ್ರಸಿದ್ಧ ಕತೆಗಾರ, ಬರಹಗಾರರಾದ ಶೇಷನಾರಾಯಣರು ಹುಟ್ಟಿದ್ದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ. ತಂದೆ ಬಿ.ವಿ. ಸುಬ್ರಹ್ಮಣ್ಯ, ತಾಯಿ ಕಾವೇರಮ್ಮ. ಓದಿದ್ದು ನಾಲ್ಕನೆಯ ತರಗತಿವರೆಗೆ. ಶಾಲಾ ಕಾಲೇಜು ಸೇರಿ ಅಲ್ಲಿನ ಜೀವನವನ್ನು ಅನುಭವಿಸಬೇಕಿದ್ದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದು, ಪಡೆದದ್ದು ಇಡೀ ಭಾರತ ದರ್ಶನ. ತಿರುಪತಿ ತಿಮ್ಮಪ್ಪನ ಫೋಟೋ ಮಾರಾಟ, ಅಷ್ಟೇಕೆ ಗಾರೆ ಕೆಲಸ, ರೈಲುಬಸ್ಸು ನಿಲ್ದಾಣಗಳಲ್ಲಿ ಹೊರೆಹೊತ್ತ ಕೂಲಿಯಾಗಿ, ಇವರಿಗೇ ತಿಳಿಯದೆ ಅದೆಷ್ಟು ಸಾಹಿತಿಗಳ ಹೊರೆ ಹೊತ್ತಿದ್ದಾರೋ ? ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿ ಹೀಗೆ ಒಂದೇ, ಎರಡೇ . ಭಾರತವೆಲ್ಲಾ ಸುತ್ತಿ ಗಂಗೆ, ನರ್ಮದೆ, ಯಮುನೆ, ಗೋದಾವರಿ, ಕೃಷ್ಣ, ಕಾವೇರಿಯಲ್ಲಿ ಮಿಂದು ಕಡೆಗೆ ಬೆಂಗಳೂರಿನಲ್ಲಿ 1971ರಲ್ಲಿ ತೆರೆದದ್ದು ಪ್ರಿಂಟಿಂಗ್ ಪ್ರೆಸ್. ಹಲವಾರು ವಿಘ್ನಗಳಿಂದ ಕೈ ಸುಟ್ಟುಕೊಂಡರು. ಕಡೆಗೆ ಚಿತ್ರಗುಪ್ತ ಉಪಸಂಪಾದಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಚ್ಚುಕೂಟದ ಮೇಲ್ವಿಚಾರಕರಾಗಿ, ಹಲವಾರು ಪ್ರೆಸ್ಸುಗಳಲ್ಲಿ ಕೆಲಸಗಾರರಾಗಿ, ಹೆಚ್ಚು ವರ್ಷಗಳು ಬರವಣಿಗೆಯಿಂದಲೇ ತುಂಬಿದ ಒಡಲು. ರೂಢಿಸಿಕೊಂಡದ್ದು ಬರವಣಿಗೆ. ಹಲವಾರು ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಕಥಾ ಸಂಕಲನಗಳು 6 - ಸೀಳುನಾಯಿ, ಮೊಲ್ಲೆ ಮಲ್ಲಿಗೆ (ಬೆಂಗಳೂರು ವಿ.ವಿ.ದ ಪಿಯುಸಿ ಪಠ್ಯ) ಕುಮುದ, ಅಹಲ್ಯೆ ಕಲ್ಲಾಗಲಿಲ್ಲ, ಕೃಷ್ಣನ ಬಲಗಾಲು, ಶಕುನಿಮಾವ. ಕಾದಂಬರಿಗಳು 20- ಮೂಲನಕ್ಷತ್ರ, ಕಪಿಲೆ, ಪದ್ಮರಂಗು, ನೊರೆ, ಎರಡು ಉಂಗುರ, ಬೆಳಗಾಯಿತು, ಸೌಮ್ಯ ಮುಂತಾದುವು. ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆಗಳು. ತಮಿಳಿನಿಂದ ಕನ್ನಡ-ಕನ್ನಡದಿಂದ ತಮಿಳಿಗೆ ಅನುವಾದ. ಒಟ್ಟು 40 ಕೃತಿ ಪ್ರಕಟಿತ. ಎರಡು ರಾಜ್ಯಗಳ ನೀರಿನ ಸಮಸ್ಯೆಯ ಮೇಲೆ ಬರೆದ ಸಂಶೋಧನಾತ್ಮಕ ಕೃತಿ ‘ಕಾವೇರಿ ಒಂದು ಚಿಮ್ಮು, ಒಂದು ಹೊರಳು’, ‘ನಮ್ಮ ನದಿಗಳು ಮತ್ತು ಸಮಸ್ಯೆಗಳು.’ ಸಂದ ಪ್ರಶಸ್ತಿಗಳು-ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯಿಂದ ಬಹುಮಾನ, ಕನ್ನಡ ಪ್ರಕಾಶಕರ ಮತ್ತು ಬರಹಗಾರರ ಸಂಸ್ಥೆಯಿಂದ ಸನ್ಮಾನ, ರೈತ ಸಂಘದಿಂದ ಸನ್ಮಾನ, ತಮಿಳುನಾಡು ಸರಕಾರದಿಂದ ಕುರಳ್‌ಪೀಠ ಪ್ರಶಸ್ತಿ, ಇತ್ತೀಚಿನ ಪ್ರತಿಷ್ಠಿತ ಅನಕೃ ಪ್ರತಿಷ್ಠಾನ ಪ್ರಶಸ್ತಿ ಮುಂತಾದುವು.  ಸರಳತೆಯಲ್ಲೇ ಸಾಧನೆ ಮೆರೆದ ಸಾಹಿತಿ ಶೇಷನಾರಾಯಣ ಅವರು ದಿನಾಂಕ 7 ಆಗಸ್ಟ್ 2019ರಂದು ಬೆಂಗಳೂರಿನ ಎಂ.ಎಸ್.ಪಾಳ್ಯದ ನಿವಾಸದಲ್ಲಿ ನಿಧನರಾದರು

ಶೇಷನಾರಾಯಣ

(18 Aug 1927-07 Aug 2019)

Awards