About the Author

ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ  ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು.

ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ  ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ಸಂಧ್ಯಾ ಪತ್ರಿಕೆ’’ ಪ್ರಧಾನ ಸಂಪಾದಕಿಯಾಗಿದ್ದಾರೆ. 

ಸರಸ್ವತಿ ವಿದ್ಯಾ ಮಂದಿರ (1974) ಮತ್ತು ವ್ಯಾಲಿ ಶಾಲೆ (1983 ) ಗಳಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು, ಕಳೆದ 52  ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿದ್ದಾರೆ. ಸುಮಾರು 250 ಸಣ್ಣಕತೆಗಳು, 35 ಕಾದಂಬರಿಗಳು, 200 ಕ್ಕೂ ಹೆಚ್ಚು ಕವನಗಳು, ಹಾಸ್ಯ ಬರಹಗಳು, ವಿಮರ್ಶೆಗಳು, ನಾಟಕ, ಜೀವನಚರಿತ್ರೆ ಮತ್ತು ಸುಮಾರು 800  ನಾಟಕ - ನೃತ್ಯ ವಿಮರ್ಶಾ ಲೇಖನಗಳು ಮತ್ತು ಇತರ ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕಿರುಗುಟ್ಟುವ ದನಿಗಳು (1979 ), ತಾಳ ತಪ್ಪಿದ ಮೇಳ (1984) ಬೆಳಕಿಂಡಿ (1997 ) ಆಗಂತುಕರು  ಮತ್ತು ಚಿತ್ರವಿಲ್ಲದ ಚೌಕಟ್ಟು (2021)  ಇವರ ಪ್ರಕಟಿತ  ಕಥಾ ಸಂಕಲನಗಳು. ಪರಿವೇಷ , ಪರಿಭ್ರಮಣ, ಕವಣೆಗಿಟ್ಟ ಕಲ್ಲು, ಮಧುಸಿಂಚನ, ನೃತ್ಯ ಸರಸ್ವತಿ, ಬೊಗಸೆ ಬೆಳದಿಂಗಳು, ನೆಲೆಗಾಣದ ಹಕ್ಕಿ, ಚೈತ್ರ ಪಲ್ಲವಿ, ಕನಸಿನ ಬೆನ್ನೇರಿ ಬಂತು, ಬೆಳ್ಳಿಕಿರಣ, ಕಂದರ, ಉದ್ಧಾರ, ತಿಳಿಮೋಡ ತೇಲಿತು, ಮಂಜಿನ ಮಹಲು, ಗುಹಾಂತರ, ಪ್ರೇಮಚಂದನ, ಮೋಡದ ನೆರಳು, ಕಾನನದ ನಡುವೆ, ಗುಪ್ತಗಾಮಿನಿ, ಮನಸೇ ಓ ಮನಸೇ, ಶ್ವೇತಮಹಲ್, ಪ್ರೀತಿ ನೂರು ಬಣ್ಣ, ಅಗ್ನಿಚುಂಬನ, ಕನಸಿಗೊಂದು ಕನ್ನಡಿ, ಮೌನ ಗರ್ಭ, ಕಪ್ಪು ಮೋಡ ಬೆಳ್ಳಿ ಅಂಚು, ನಿರ್ಮಾಲ್ಯ, ಸರಿದ ತೆರೆ, ಬಿಸಿಲ ಮಳೆ, ಅನಾವರಣ, ಇರುಳು ಕರಗಿತು, ಕಪ್ಪು ಮೋಡ ಬೆಳ್ಳಿ ಅಂಚು ಮುಂತಾದ ಒಟ್ಟು 35 ಕಾದಂಬರಿಗಳು ಪ್ರಕಟಗೊಂಡಿವೆ.

ಉರಿದು ಹೋದ ಕನಸುಗಳು (2004) ಕವನ ಸಂಕಲನ, ರಂಗಾಂತರಂಗ  ರಂಗವಿಮರ್ಶೆಗಳ ಸಂಕಲನ.  ನಾಟ್ಯಾಂತರಂಗ -ನೃತ್ಯ ಪ್ರದರ್ಶನಗಳ ಸಂಕಲನ ,ನೃತ್ಯಕಲಾವಿದರ ಪರಿಚಯಮಾಲಿಕೆ, ನೃತ್ಯಲೋಕ .

ವಿಚಾರ ಸಾಹಿತ್ಯ- ಮಹಿಳೆ ಮತ್ತು ಉದ್ಯೋಗ  (1975– ಅಂತರರಾಷ್ಟ್ರೀಯ ಮಹಿಳಾವರ್ಷ)ದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಮತ್ತು ಕೆನರಾ ಬ್ಯಾಂಕ್ ವಿಶೇಷ ಪ್ರಶಸ್ತಿ ಪಡೆದಿದೆ. ಅಹಲ್ಯಾಬಾಯಿ ಹೋಳ್ಕರ್ (1976) ಜೀವನಚರಿತ್ರೆ,  ನಮ್ಮ ಲೇಖಕಿಯರು (1982- ಕನ್ನಡ ಲೇಖಕಿಯರ ಪರಿಚಯ ಗ್ರಂಥ )ಸಂಪಾದನೆ,  ಆಕಾಶವಾಣಿ ಹಾಗೂ ದೂರದರ್ಶನ ಮಾಧ್ಯಮಕ್ಕಾಗಿ ರಚಿಸಿದ ಸುಮಾರು 30 ಕ್ಕೂ  ಹೆಚ್ಚು ನಾಟಕಗಳು ಪ್ರಸಾರವಾಗಿವೆ - ಪ್ರದರ್ಶಿತವಾಗಿವೆ.

ಆಕಾಶವಾಣಿ ಹಾಗೂ ದೂರದರ್ಶನದಲ್ಲಿ `ಮಾನ್ಯತೆ’ (ಆಡಿಷಂಡ್ ) ಪಡೆದ ಕಲಾವಿದೆ. ಆಕಾಶವಾಣಿಯಲ್ಲಿ ಇದುವರೆಗೂ ಸುಮಾರು 150 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದೆ. ಅವುಗಳಲ್ಲಿ, ಸುಮಾರು  50 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಣೆ, ಸಾಹಿತ್ಯ ಚರ್ಚೆ, ವಿಚಾರಸಂಕಿರಣ, ಕಥಾವಾಚನ, ಕವನ ವಾಚನ, ಯುವವಾಣಿ, ಮಹಿಳಾ ಕಾರ್ಯಕ್ರಮಗಳು, ಚಿಂತನ,  ಸಂದರ್ಶನ, ಸಂವಾದ ಗೋಷ್ಠಿಗಳು ಮತ್ತು ರೂಪಕ ರಚನೆ ಮುಂತಾದವು. 

ದೂರದರ್ಶನದಲ್ಲಿ ಇದುವರೆಗೂ ಸುಮಾರು 50  ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗಿದೆ. ಅವುಗಳಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳು ಸೇರಿವೆ. ಸುಮಾರು 20 ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಲಾಗಿದೆ.

ಇತರ ಹವ್ಯಾಸಗಳು    ಶಾಸ್ತ್ರೀಯ ಕೂಚಿಪುಡಿ ನೃತ್ಯ ಕಲಿಕೆ, ಜಾನಪದ ನೃತ್ಯ ಹಾಗೂ ಅನೇಕ ನೃತ್ಯರೂಪಕ (ಪ್ರಭಾತ್ ಕಲಾವಿದರು ಬ್ಯಾಲೆ)ಗಳಲ್ಲಿ ಪಾಲ್ಗೊಂಡ ಅನುಭವ. ಶಾಲಾ -ಕಾಲೇಜು ದಿನಗಳಿಂದಲೂ ಚಿತ್ರಕಲೆ-ಪೇಯಿಂಟಿಂಗ್ ಗಳ ರಚನೆ, ಪ್ರದರ್ಶನ ಮತ್ತು ಬಹುಮಾನಗಳ ಗಳಿಕೆ.

ಬಾಲ್ಯದಿಂದಲೂ ನಾಟಕಾಸಕ್ತಿ. ಇದುವರೆಗೂ ರಂಗಭೂಮಿಯ ವೇದಿಕೆಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರವಹಿಸಿದ ಅನುಭವ. ಅನೇಕ ನಾಟಕಗಳಿಗೆ ಬಹುಮಾನ. ಅವುಗಳಲ್ಲಿ ಪ್ರಮುಖವಾಗಿರುವುವು –ಚಾಕೊಲೆಟ್ ಸಿಪಾಯಿ, ಸಾಯೋ ಆಟ, ಕಲಹ ಕುತೂಹಲ, ಅಂಜಿ, ಸದ್ದು ವಿಚಾರಣೆ ನಡೆಯುತ್ತಿದೆ, ಸಾಕ್ಷಿಕಲ್ಲು, ಮಹಾಸಾಗರ, ಸೊಹ್ರಾಬ್-ರುಸ್ತುಂ, ಪೌಲಸ್ಥ್ಯನ ಪ್ರಣಯ ಕಥೆ, ಸುಯೋಧನ, ಕುಮಾರರಾಮ, ಸರಕಾರೀ ಅಳಿಯತನ, ಚೆಂದುಳ್ಳಿ ಚೆಲುವೆ, ಸೌಹಾರ್ದ ಮುಂತಾದವು. 

ರಂಗಭೂಮಿಯ ಅನೇಕ ವಿಚಾರಸಂಕಿರಣ-ಚರ್ಚೆಗಳಲ್ಲಿ ಭಾಗವಹಿಸಲಾಗಿದೆ. ಮಕ್ಕಳ ನಾಟಕಗಳ ರಚನೆ ಹಾಗೂ ನಿರ್ದೇಶನ. ಹಲವಾರು ಪ್ರಾಯೋಗಿಕ ನಾಟಕಗಳ ನಿರ್ದೇಶನ. ರಂಗಸಜ್ಜಿಕೆ, ಹಿನ್ನಲೆ ಸಂಗೀತ, ಬೆಳಕು ನಿರ್ವಹಣೆ ಮುಂತಾದ ನೇಪಥ್ಯ ಕಾರ್ಯಗಳಲ್ಲಿ ದುಡಿದ ಅನುಭವ. 

`ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡದ ಸಂಸ್ಥಾಪಕ ಅಧ್ಯಕ್ಷೆ.(1977) ನಾಲ್ಕು ದಶಕಗಳಿಗೂ ಮಿಕ್ಕು ಕನ್ನಡ ನಾಟಕರಂಗದಲ್ಲಿ ಮತ್ತು ಸಂಧ್ಯಾ ಕಲಾವಿದರು ನಾಟಕತಂಡದಲ್ಲಿ ಸಕ್ರಿಯ ಚಟುವಟಿಕೆಗಳು. ತಂಡದ ಎಲ್ಲ ನಾಟಕಗಳ ಸಂಘಟನೆ, ನಿರ್ವಹಣೆ. ನಾಟಕಗಳ ಹಿನ್ನಲೆ ಧ್ವನಿ, ಸಂಗೀತ, ಬೆಳಕು ಸಂಯೋಜನೆ, ಉಡುಪು , ರಂಗಸಜ್ಜಿಕೆ ಇತ್ಯಾದಿಗಳ ವಿನ್ಯಾಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ. ಇದಲ್ಲದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕಿಯಾಗಿ ದುಡಿದ ಅನುಭವ. ಇದೀಗ ಸಂಧ್ಯಾ ಕಲಾವಿದರು ತಂಡಕ್ಕೆ ನಲವತ್ತೈದರ ಸಂಭ್ರಮ.

`ಅಭಿನವ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆ (1978 ) ಯ ಸ್ಥಾಪಕಿ. ಇದುವರೆಗೂ ಅನೇಕ ಪುಸ್ತಕಗಳ ಪ್ರಕಟಣೆ. ಪ್ರಕಾಶಕಿಯಾಗಿ ಕಳೆದ ನಾಲ್ಕು ದಶಕಗಳ ಅನುಭವ. ಡಿ.ಟಿ.ಪಿ,  ಮುದ್ರಣ, ವಿನ್ಯಾಸ, ಸಂಪಾದಕತ್ವ ಹಾಗೂ ಪುಸ್ತಕ ಮಾರಾಟದ ಅನುಭವ.  2016- ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ  ಗೌರವ  (18-10-2016).

 

 


 

ಸಂಧ್ಯಾ ಶರ್ಮ ವೈ.ಕೆ

(01 Jun 1955)

BY THE AUTHOR