ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ 1898ರ ಡಿಸೆಂಬರ್ 24ರಂದು ಜನಸಿದರು. ತಂದೆ ವೆಂಕಟಸುಬ್ಬಯ್ಯ- ತಾಯಿ ವೆಂಕಟಲಕ್ಷ್ಮಮ್ಮ. ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ (1921) ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು.
1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ತುಮಕೂರಿನಲ್ಲಿ (1928-33), 1933ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ 1954ರಲ್ಲಿ ನಿವೃತ್ತರಾದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ಉಪಾಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿಯೂ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣ ಸಮಿತಿಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರಿನ ಸಹಕಾರ ಸಂಘ, ಪದವೀಧರರ ಸಹಕಾರ ಸಂಘ, ಅನಾಥಾಲಯ ಇವುಗಳ ಅಧ್ಯಕ್ಷರಾಗಿಯೂ, ಶಾರದಾವಿಲಾಸ ವಿದ್ಯಾ ಸಂಸ್ಥೆಗಳ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ರಂಗಬಿನ್ನಪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (1965) ದೊರೆತಿದೆ. ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಿ.ಲಿಟ್. (1970) ಪದವಿಯನ್ನೂ ನೀಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ (1933-1938) ಆಗಿದ್ದರು. ಶಿವಮೊಗ್ಗೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ (1976) ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಚಳುವಳಿಯಲ್ಲಿ ಸದಾ ನಿರತರಾಗಿದ್ದು ರಜತಗಜ ಪ್ರಶಸ್ತಿಗೆ ಪಾತ್ರರಾಗಿದ್ದರು. 1987ರ ಫೆಬ್ರುವರಿ 17ರಂದು ನಿಧನರಾದರು.
ಕನ್ನಡ ಕೃತಿಗಳು: ಕುಮಾರವ್ಯಾಸನ ವಾಣಿ, ಕಾಳಿದಾಸನ ನಾಟಕಗಳ ವಿಮರ್ಶೆ, ರಂಗಬಿನ್ನಪ, ಮರುಬಿನ್ನಪ, ಕವಿಕಥಾಮೃತ, ನಾಟುನುಡಿ, ಹರಿಶ್ಚಂದ್ರಕಾವ್ಯ(ನಾಟಕ), ಉತ್ತರಕುಮಾರ(ನಾಟಕ), ಪಾಶ್ಚಾತ್ಯ ಗಂಭೀರ ನಾಟಕಗಳು(ಬೃಹದ್ಗ್ರಂಥ), ಶೈಲಿ ಇತ್ಯಾದಿ.
ಇಂಗ್ಲಿಷಿನಲ್ಲಿ ಪರಿಣತಿ ಹೊಂದಿದ್ದ ಇವರು ಹಲವಾರು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ದಿ ಲೇಡಿ ಅಂಡ್ ರಿಂಗ್, ಓಲ್ಡ್ ಟೇಲ್ಸ್ ರಿ ಟೋಲ್ಡ್, ಆನ್ ದಿ ಸೆಲ್ಫ್, ಬಿಎಂಶ್ರೀ(ಬಯೋಗ್ರಾಫಿ) ಇತ್ಯಾದಿ.