About the Author

ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ಶಿಕ್ಷಣದ ನಂತರ 'ಅನ್ವೇಷಣೆ' ಸಾಹಿತ್ಯ ಪತ್ರಿಕೆ ಹುಟ್ಟು ಬೆಳವಣಿಗೆಗೆ ಕಾರಣರಾದರು. ಸೃಜನಶೀಲ ಹಾಗು ಸೃಜನೇತರ ಬರವಣಿಗೆಯಲ್ಲಿ ಕೃಷಿಮಾಡಿದ ನಾಗರಾಜ್ ಅವರು ನಾಡಿನ ಹಲವು ಮಾಧ್ಯಮಗಳಲ್ಲಿ ದುಡಿದ ಅನುಭವ ಹೊಂದಿದ್ದಾರೆ. ಎಲ್ಲಿಯೂ ಗಟ್ಟಿಯಾಗಿ ನಿಲ್ಲದ ಅಲೆಮಾರಿ, ಹರಿವ ನೀರಿನ ಮನಸ್ಥಿತಿ. ನಿಷ್ಠುರ, ನೇರ ಮಾತಿನಿಂದ ಶತ್ರುಗಳ ಸಂಖ್ಯೆಯಷ್ಟೇ ಪ್ರೀತಿಯ ಮಿತ್ರರನ್ನೂ ಪಡೆದ ಹೆಗ್ಗಳಿಕೆ ಅವರದು, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕ, ತೊಂಬತ್ತರ ದಶಕದಲ್ಲಿ ರಾಜ್ಯದಾದ್ಯಂತ ಪುಸ್ತಕ ಜಾಥಕ್ಕೆ ಚಾಲನೆ ನೀಡಿದ್ದಲ್ಲದೆ ಅಕ್ಷರ ದಾಸೋಹದ ಮೂಲಕ ಕಡಿಮೆ ಬೆಲೆಯಲ್ಲಿ ಜನತೆಯತ್ತ ಪುಸ್ತಕ ಕೊಂಡೊಯ್ದ ಯಶಸ್ಸಿನಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ, ಈ ಮೂಲಕ ರಾಜ್ಯದಾದ್ಯಂತ ಪಡೆದ ಸ್ನೇಹ ವಲಯ ಅಪಾರ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಕನ್ನಡ ಶಾಲೆ ಮುಚ್ಚುವುದರ ವಿರುದ್ಧದ ಪ್ರತಿಭಟನೆಯಲ್ಲಿ ದನಿ ಎತ್ತಿದ್ದಕ್ಕೆ ಬಂಧನಕ್ಕೊಳಗಾಗಿ ಕೆಲದಿನ ಸೆಂಟ್ರಲ್ ಜೈಲ್  ಅನುಭವನ್ನು ಕಂಡಿದ್ದಾರೆ. 

'ಸಂಕರ', 'ಕಡಗೋಲು', `ಊರುಗೋಲು' ಈಗ 'ಶಹನಾಯ್' ಕವನ ಸಂಕಲನ, 'ಸಿಡಿದವರು' ಕಥಾಸಂಕಲನ, 'ಸಮೂಹಪ್ರಜ್ಞೆ ವಿಮರ್ಶೆ, 'ಗ್ರೀನ್‌ರೂಂ' ರಂಗಭೂಮಿ ಚಿಂತನೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕತ ಕಲಾವಿದ ಎಚ್.ಟಿ. ಅರಸು', ಕರ್ನಾಟಕ ವಿಧಾನಮಂಡಲದ ಸಂಸದೀಯಪಟು ಮಾಲಿಕೆಯಲ್ಲಿ 'ಎಚ್. ಸಿದ್ದವೀರಪ್ಪ', 'ಕಾಕ್ಟೈಲ್ ಲಹರಿ' ಅಂಕಣ ಬರಹ, 'ಮಾಧ್ಯಮ ಹಾಗೂ ಅಭಿವ್ಯಕ್ತಿ ಮೀಮಾಂಸೆ', 'ಬೆಳ್ಳಿಚುಕ್ಕಿ' ಸ್ವತಂತ್ರ ಕೃತಿಗಳು. 'ಬಂಡಾಯ ಹತ್ತು ವರ್ಷ', 'ಮಂದಿರ ಮಸೀದಿ ಹಾಗೂ ಕೋಮುವಾದ', 'ಯುಗದಕವಿ ಜಗದಕವಿ', 'ಗಿರೀಶ್ ಕಾರ್ನಾಡರ ಎಂಟು ರಂಗನಾಟಕಗಳು' ಸಂಪಾದಿತ ಕೃತಿಗಳು, ಅನ್ವೇಷಣೆ ಪ್ರಕಾಶನದ ಮೂಲಕ ಮೂವತ್ತಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ. ಆರ್.ಜಿ. ಹಳ್ಳಿ ನಾಗರಾಜ್ ಅವರ ಸಾಹಿತ್ಯ ಸೇವೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ವಿವಿಧ ಅಕಾಡೆಮಿಗಳಿಂದ ಗೌರವ ಪುರಸ್ಕಾರಗಳು ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ. 

ಆರ್.ಜಿ. ಹಳ್ಳಿ ನಾಗರಾಜ್

BY THE AUTHOR