About the Author

ಪಾದೇಕಲ್ಲು ವಿಷ್ಣು ಭಟ್ಟ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 06-02-1956 ರಂದು ಜನಿಸಿದರು. ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ, ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿದ ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮಸ್ಥಾನದಲ್ಲಿ ಎಂ.ಎ ಪದವಿ ಪಡೆದರು. ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು. ನಂತರ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ತುಳುನಿಘಂಟು ಯೋಜನೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ, ಖ್ಯಾತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರಿಗೆ ಲಿಪಿಕಾರರಾಗಿ ಸಹಾಯಕರಾಗಿದ್ದುದಲ್ಲದೆ ಅವರ ಹಲವು ಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಸಂಪಾದಿಸಿದ್ದಾರೆ.

ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ‘ಉಡುಪಿ ಶ್ರೀ ಶೀರೂರು ಮಠದಿಂದ ಶ್ರೀಕೃಷ್ಣನುಗ್ರಹ ಪ್ರಶಸ್ತಿ’ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಟಿ.ವಿ.ವೆಂಕಟಾಚಲ ಶಾಸ್ತಿ ವಿದ್ವತ್ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಸೇಡಿಯಾಪು ಪ್ರಶಸ್ತಿ, ಉಡುಪಿ ಶ್ರೀ ಪೇಜಾವರ ಮಠದಿಂದ ರಾಮವಿಠಲ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಲಭಿಸಿವೆ. 

ಪಾದೇಕಲ್ಲು ವಿಷ್ಣು ಭಟ್ಟ

(06 Feb 1956)