ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದಲ್ಲಿರುವ ಬೆಣಚನಹಳ್ಳಿಯಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಂತರ ಕೆಲಕಾಲ ಕನ್ನಡ ಪ್ರಭ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ. ಮೇಷ್ಟ್ರು ವೃತ್ತಿ ಬಗ್ಗೆ ಮೊದಲಿಂದ ತೀವ್ರತರ ಒಲವು. ಪರಿಣಾಮವಾಗಿ ಕೆಲ ಕಾಲ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಣೆ. ಪ್ರಸ್ತುತ ಸುರಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನ ಕೆಲಸ.
ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ. ‘ಬೆಳಕು ಸದ್ದುಗಳನ್ನು ಮೀರಿ’ , ‘ ಸರಸ್ವತಿ ಅಕಾಡಮಿ’- ಕಥಾಸಂಕಲನಗಳು. ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ – ಕಾದಂಬರಿ. ‘ ಅಮಿತಾಭ್ ಕಲಾಗಾಥೆ’- ಅಮಿತಾಭ್ ಅವರ ಬಗ್ಗೆ ಕನ್ನಡ ಟೈಂಸ್ ಪತ್ರಿಕೆಯಲ್ಲಿ ಬರೆದ ಜೀವಣ ಚಿತ್ರಣ ರೂಪ. 15 ನಾಟಕಗಳು ಹಾಗೂ 11 ರಂಗರೂಪಗಳ ರಚನೆ. ಅವುಗಳಲ್ಲಿ ಮುಖ್ಯವಾಗಿ ‘ ಸಾಲ ತೀರಿಸು ಗಾಲಿಬ್’ ನಾಟಕ ರವೀಂದ್ರ ಕಲಾಕ್ಷೇತ್ರ-50ರ ಸಂಭ್ರಮದ ನೆನಪಿಗೆ ನಡೆಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆಯಿತು. ನಂತರ ಕರ್ನಾಟಕ ನಾಟಕ ಅಕಾಡಮಿಯವರು 2017ರಲ್ಲಿ ನಡೆಸಿದ ನಾಟಕ ರಚನಾ ಸ್ಪರ್ಧೆಯಲ್ಲಿ ‘ ಸಾಕುತಂದೆ ರೂಮಿ’ ಬಹುಮಾನ ಗಳಿಸಿತು. ಇವುಗಳಲ್ಲದೆ ‘ ಅಭಿನವ ಚಾಪ್ಲಿನ್’ , ‘ ಮನವೆಂಬ ಸರಸಿಯಲಿ’, ‘ ಟೂಮಚ್ ಆಫ್ ವುಮನ್’ , ‘ ಲಾಫಿಂಗ್ ಕ್ಲಬ್’ ‘ ಎಸಡೀಹುಣ್ಣು’ ‘ ಯಾವ ಹಿರಿಕರ್ತನದೋ ಈ ಜಗದ ನಾಟಕವು’ ಮೊದಲಾದ ನಾಟಕ ಕೃತಿಗಳು ಪ್ರಕಟಗೊಂಡಿವೆ. ಇವುಗಳ ಜೊತೆಗೆ ಬೀಚಿ ರಸಾಯನ, ಬೀಚಿ ಹೌಸ್, ನಟರತ್ನಾಕರ, ಧರ್ಮಸ್ಥಂಭ- ಮುಂತಾದ ರಂಗರೂಪಗಳು ರಂಗದ ಮೇಲೆ ಮೈತಾಳಿವೆ. ಕರ್ನಾಟಕ ಸಾಹಿತ್ಯ ಅಕಾಡಮಿಗೆ ‘ ವಾರ್ಷಿಕ ಕವಿತೆ’ ಸಂಪಾದಿಸಿ ಕೊಟ್ಟಿದ್ದಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಾಬು ಜಗಜೀವನ ರಾಂ ಅವರ ಬಗೆಗೆ ಇರುವ ಲೇಖನಗಳನ್ನು ಅನುವಾದಿಸಿ ಅಗ್ರಹಾರ ಕೃಷ್ಣಮೂರ್ತಿಯವರ ಜೊತೆ ಸಂಪಾದಕನ ಕೆಲಸವನ್ನು ನಿರ್ವಹಿಸಿದ್ದಾರೆ. ಕೆಲ ಕಾಲ ಕೆಂಡಸಂಪಿಗೆ ಬ್ಲಾಗ್ ನಲ್ಲಿ ‘ ರಂಗ ವಠಾರ’ ಅಂಕಣ ಬರೆಯುತ್ತಿದ್ದರು.
ಪ್ರಜಾವಾಣಿ ನಡೆಸುವ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೂರು ಬಾರಿ – 2000, 2008 ಹಾಗೂ 2009ರಲ್ಲಿ ಸ್ಪರ್ಧಿಸಿ ಬಹುಮಾನ ಗಳಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ರಂಗವಿಮರ್ಶೆ, ಕವಿತೆ, ಕಥೆ, ಪ್ರಬಂಧಗಳು ಪ್ರಕಟಗೊಂಡಿವೆ.