ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ.
ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು (ಅಂಕಣ ಬರಹ) ಮುಂತಾದವು. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ೨೦೧೬ರ ದತ್ತಿ ಪ್ರಶಸ್ತಿ, ರಾಜ್ಯ ಮಟ್ಟದ ಚೇತನ ಸಾಹಿತ್ಯ ಪುರಸ್ಕಾರ, ಭಾರತೀಯ ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರಿನ ರಾಜ್ಯ ಮಟ್ಟದ ಭಾರತ ಭೂಷಣ ಪ್ರಶಸ್ತಿ, ಸಮಾಜಮಾತೆ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.