About the Author

ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

1968ರಲ್ಲಿ ಸ್ನಾತಕೋತ್ತರ ಪದವಿ ಮುಗಿದೊಡನೆ ಗದುಗಿನ ಕಾಮರ್ಸ್ ಕಾಲೇಜಿನಲ್ಲಿ ಒಂದು ವರ್ಷ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಆ  ನಂತರ 1970-72 ರವರೆಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. 1972 ರಿಂದ 2003 ರವರೆಗೆ ಮೈಸೂರಿನ ಮಹಾಜನ ಪದವಿಪೂರ್ಣ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪದವಿ ಶಿಕ್ಷಣದ ವೇಳೆಗೆ ಪಾ.ಲ. ಸುಬ್ರಹ್ಮಣ್ಯ, ಸ್ನಾತಕೋತ್ತರ ಪದವಿಗಾಗಿ ಓದುತ್ತಿರುವಾಗ ಡಾ. ಶಾಂತಿನಾಥ ದೇಸಾಯಿ. 1970ರಿಂದ 72 ರ ಅವಧಿಯಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಪೂರ್ಣ ಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರು ನಡೆಸುತ್ತಿದ್ದ ತ್ರೈಮಾಸಿಕ ‘ಸಾಕ್ಷಿ’ಗಾಗಿ ಬರೆಯಲು ಪ್ರೇರೆಪಿಸಿದರು. ಈ ಸಮಯದಲ್ಲಿ ಏ.ಕೆ. ರಾಮಾನುಜನ್ ಮತ್ತು ಅಡಿಗರ ಕಾವ್ಯದ ಮೇಲೆ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಬರೆದ ವಿಮರ್ಶಾ ಲೇಖನಗಳಿಗೆ ಪ್ರತಿಕ್ರಿಯಿಸಿದ್ದು ಮತ್ತು ಅದು ಒಂದು ಗಂಭೀರ ಚರ್ಚೆಯ ಸ್ವರೂಪ ಪಡೆದದ್ದು ಮಹತ್ವದ ವಿಷಯ. ಈ ಚರ್ಚೆ ವಿಮರ್ಶಾ ಕ್ಷೇತ್ರದಲ್ಲಿ ಮಾಧವ ಕುಲಕರ್ಣಿ ಅವರನ್ನು ಮುಂಚೂಣಿಗೆ ತಂದಿತು ಎನ್ನಬಹುದು.

ವಿಮರ್ಶೆ, ಕಾವ್ಯ, ಕತೆ, ಕಾದಂಬರಿ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ವಿಮರ್ಶಾ ಸಂಕಲನಗಳು: ‘ಜೀವಂತ ಧೋರಣೆಗಳು’, ‘ತುಡಿತ’, ‘ಯೋಚನೆಗಳು ಮತ್ತು ಲೇಖನಗಳು’, ]ವಿಧವಿಧ ನಾನಾ ವಿಧ’, ‘ಪ್ರಮಾಣ’, ‘ಕಾರಂತರ ಕಾದಂಬರಿಗಳು’, ‘ಗಿರೀಶ ಕಾರ್ನಾಡರ ನಾಟಕ ಪ್ರಪಂಚ’, ‘ಬಂಧ ಬಂಧುರ’, ‘ಪರಿಭಾವ’, ‘ಜ್ಞಾನಪೀಠ ಕೃತಿ ನೋಟ’, ‘ಭೈರಪ್ಪನವರ ಕಾದಂಬರಿ ಪ್ರಪಂಚ’, ‘ಕಂಬಾರರ ಅಭಿವ್ಯಕ್ತಿ ಮಾರ್ಗ’, ‘ನಾನು ಬರೆದ ಮುನ್ನುಡಿಗಳು’, ‘ವಿಮರ್ಶೆಯ ಹೊಳೆ 3 ಸಂಪುಟಗಳಲ್ಲಿ ಸಮಗ್ರ ವಿಮರ್ಶೆ’ . ಕಥಾ ಸಂಕಲನಗಳು: ‘ವಜ್ರ’, ‘ಉದ್ಯಾನವನ ಮತ್ತು ಇತರ ಕಥೆಗಳು’, ‘ಅದೇ ಮುಖ’, ‘ಉದ್ಯಾನವನ’(ಆಯ್ದ ಕಥೆಗಳು), ‘ಪಾತಾಳಗರಡಿ’, ‘ಕುಲಕರ್ಣಿಯವರ ನವವತ್ಮೂರು ಕಥೆಗಳು’, ‘ರಾಗ ದ್ವೇಷ’, ‘ಮರಳಿದ ನೆನಪು’, ‘ಪ್ರತ್ಯಕ್ಷ’, ‘ಕುಲಕರ್ಣಿಯವರ ಆಯ್ದ ಕಥೆಗಳು’, ‘ಕಥಾಸಾಗರ’(ಸಮಗ್ರ ಕಥೆಗಳು, ಎರಡು ಸಂಪುಟಗಳಲ್ಲಿ), ಅನೇಕ ಕಥೆಗಳು ಮರಾಠಿ ಮತ್ತು ಉರ್ದುವಿಗೆ ಅನುವಾದಗೊಂಡಿವೆ. ಕಾದಂಬರಿಗಳು: ‘ಉನ್ನತ ಸರಸ್ವತಿ’, ‘ಕ್ರಾಂತಿ’, ‘ಮದುವೆಯ ಕಥಾ ಪ್ರಸಂಗ’. ಕವನ ಸಂಕಲನ: ‘ಮುಸುಕಿದೀ ಮಬ್ಬಿನಲಿ’, ಸಂಪಾದಿಸಿದ ಗ್ರಂಥಗಳು: ‘ಸಹ-ಸ್ಪಂದನ’(ಭೈರಪ್ಪನವರ ಕಾದಂಬರಿಗಳನ್ನು ಕುರಿತು ವಿವಿಧ ಲೇಖಕರ ವಿಮರ್ಶಾ ಸಂಕಲನ), ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ‘ವಿನಾಯಕ ಕೃಷ್ಣ ಗೋಕಾಕ’, ಭಾರತ-ಭಾರತಿ ಪುಸ್ತಕ ಸಂಪದಕ್ಕಾಗಿ ‘ಗೋಂದವಲೆ ಬ್ರಹ್ಮ ಚೈತಸ್ಯ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯಿಕ ಸೇವೆಗಾಗಿ ‘ಸಿಂಧಗಿಯ ಬೇಂದ್ರೆ ಸಾಹಿತ್ಯ ಪ್ರಶಸ್ತಿ’(ಕಾರಂತರ ಕಾದಂಬರಿಗಳು ಪುಸ್ತಕಕ್ಕೆ), ಮೂಡಬಿದರೆಯ ‘ವರ್ಧಮಾನ ಪ್ರಶಸ್ತಿ’, ‘ಗಳಗನಾಥ ಪ್ರಶಸ್ತಿ’( ಕಥಾ ಸಾಹಿತ್ಯಕ್ಕಾಗಿ), ‘ಕಾಂತಾವರ ಪ್ರಶಸ್ತಿ’(ಸಾಹಿತ್ಯ ಸಾಧನೆಗಾಗಿ, ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಗದಗ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯ ಅಧ್ಯಕ್ಷತೆ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ಅವರು 2023 ಮಾರ್ಚ್ 26 ರಂದು ನಿಧನರಾದರು.


 

ಮಾಧವ ಕುಲಕರ್ಣಿ

(01 Jun 1946-26 Mar 2023)