ಇವರು ದಿನಾಂಕ 3-7-1948 ರಂದು ಜನಿಸಿದರು. ಈಗಿನ ವಾಸ ಶಿರಸಿಯಲ್ಲಿ. ತಂದೆ ಅಣ್ಣಪ್ಪ ಹೆಗಡೆ ಮತ್ತು ತಾಯಿ ಕಾಮಾಕ್ಷಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರಾದ ಹೆಗಡೆಯವರು ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞರು.
ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.
ಪ್ರೊ. ಎಂ. ಎ. ಹೆಗಡೆ ಅವರು ಸಂಸ್ಕೃತ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ ನಾಡಿನ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಯಕ್ಷಗಾನ ಇವರ ಪ್ರಿಯವಾದ ಹವ್ಯಾಸ. ಯಕ್ಷಗಾನದಲ್ಲಿ ವೇಷಧಾರಿ, ತಾಳಮದ್ದಲೆಯ ಅರ್ಥಧಾರಿ, ಸಂಶೋಧಕ, ವಿಮರ್ಶಕ, ಮತ್ತು ಪ್ರಸಂಗ ಕರ್ತರಾಗಿ ಕೆಲಸಮಾಡಿದ್ದಾರೆ. ಇವರು, ಸೀತಾ ವಿಯೋಗ, ತ್ರಿಶಂಕು ಚರಿತ್ರೆ, ರಾಜಾಕರಂಧಮ, ಮುಂತಾದ ಸುಮಾರು ಹದಿನೈದಕ್ಕೂ ಮಿಕ್ಕ ಪ್ರಸಂಗಗಳನ್ನು ರಚಿಸಿದ್ದಾರೆ. ಅವು ಜನಪ್ರಿಯವಾಗಿದ್ದು ಸಾಕಷ್ಟು ಪ್ರಯೋಗಗಳನ್ನು ಕಾಣುತ್ತಿವೆ. 2013ರ ಮಾರ್ಚ್ ತಿಂಗಳಲ್ಲಿ ಶಿರಸಿಯಲ್ಲಿ ನಡೆದ ಎಂಟನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಇವರಿಗೆ ಸಂದಿದೆ.