ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ನಂತರ ಮಂಡ್ಯ, ದಾವಣಗೆರೆ, ಶಿವಮೊಗ್ಗ ಸರಕಾರಿ ಕಾಲೇಜುಗಳಲ್ಲಿ ಕಾರ‍್ಯ ನಿರ್ವಹಿಸಿದರು. ಸೆಂಟ್ರಲ್ ಕಾಲೇಜಿಗೆ ಸೇರಿದ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು.
ಗ್ರಂಥ ಸಂಪಾದಕ, ಉತ್ತಮ ವಾಗ್ಮಿ ಆಗಿರುವ ಅವರು ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ಡದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿ (1966-74), ಅಧ್ಯಕ್ಷ (1978-86) ರಾಗಿದ್ದರು. ಜೈನ ಸಂಶೋಧನಾ ಕೇಂದ್ರದ ನಿರ್ದೇಶಕ (1977-79) ರಾಗಿದ್ದರು. ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಚಟುವಟಿಕೆಗಳ ವಿಕೇಂದ್ರಿಕರಣ ನಡೆಸಿದ ಹಿರಿಮೆ ಅವರದು. ಎಲ್ಲ ವರ್ಗದವರಿಗೆ ಪರಿಷತ್ತಿನ ನೌಕರಿಯಲ್ಲಿ ಅವಕಾಶ ಕಲ್ಪಿಸಿದ ಅವರು ಗಡಿನಾಡು-ಹೊರನಾಡುಗಳಲ್ಲಿ ಪರಿಷತ್ತಿನ ಚಟುವಟಿಕೆ ವಿಸ್ತರಿಸಿದರು. ಜಾನಪದ ವೈದ್ಯಕೋಶ, ಜಾನಪದ ವಿಶ್ವಕೋಶ, ಸಮ್ಮೇಳನಾಧ್ಯಕ್ಷರ ಭಾಷಣ, ಬೆಳ್ಳಿ ಬಿಟ್ಟ ಬಳ್ಳಿ ಮಾಲೆ, ಮಕ್ಕಳ ಪುಸ್ತಕಮಾಲೆ ಅವರ ಅವಧಿಯಲ್ಲಿ ಪ್ರಕಟವಾದ ಪ್ರಮುಖ ಸರಣಿ ಕೃತಿಗಳು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಜೀವನ’ ಪತ್ರಿಕೆಯನ್ನು ಅವರು ಮುಂದುವರೆಸಿದರು.
ದ್ರಾವಿಡ ಭಾಷಾ ವಿಜ್ಞಾನ, ಭಾರತದ ಭಾಷಾ ಸಮಸ್ಯೆ, ಭಾಷಾ ವಿಜ್ಞಾನಿಗಳು (ಭಾಷಾವಿಜ್ಞಾನ), ಪಂಪಭಾರತ ಸಂಗ್ರಹ, ಭರತೇಶ ವೈಭವ, ಧನ್ಯಕುಮಾರ ಚರಿತ್ರೆ, ನೇಮಿನಾಥ ಪುರಾಣ, ಶಾಂತಿ ಪುರಾಣ. ಕಾದಂಬರಿ-ನಾಗಶ್ರೀ, ಸವ್ಯಸಾಚಿ ಪಂಪ. ಜಾನಪದ-ಕರ್ನಾಟಕದ ಜಾತ್ರೆಗಳು, ಜಾನಪದ ಕಲಾವಿದರ ಸೂಚಿ (ಸಂಪಾದಿತ), ಲಂಡನ್ ವಿಶ್ವವಿದ್ಯಾಲಯದಿಂದ ಬಾಹುಬಲಿ ಅಂಡ್ ಬಾದಾಮಿ ಚಾಲುಕ್ಯಾಸ್ ಕೃತಿ ಬಿಡುಗಡೆ.
ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ತಮ್ಮಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ, ಆಚಾರ್ಯ ಸುಮತಿ ಸಾಗರ ಶ್ರುತ ಸಂವರ್ಧನ ಪುರಸ್ಕಾರ ಗಳು ಸಂದಿವೆ. ಪಚ್ಚೆತೆನೆ, ಸಂಕೃತಿ ಸೇರಿ ಐದು ಅಭಿನಂದನಾ ಗ್ರಂಥ ಸಲ್ಲಿಸಲಾಗಿದೆ.