ಕಾದಂಬರಿಕಾರ ದು.ನಿಂ. ಬೆಳಗಲಿಯವರು (ಪೂರ್ಣ ಹೆಸರು: ದುರದುಂಡೇಶ್ವರ ನಿಂಗಪ್ಪ ಬೆಳಗಲಿ, ಜನನ: 30-03-1931) ಹುಟ್ಟಿದ್ದು ಬನಹಟ್ಟಿಯಲ್ಲಿ. ತಂದೆ ನಿಂಗಪ್ಪ. ತಾಯಿ ಚೆನ್ನಮ್ಮ, ಅಥಣಿ ತಾಲ್ಲೂಕಿನ ಐನಾಪುರ ಇವರ ಮೂಲ. ಬನಹಟ್ಟಿಯಲ್ಲಿ ನೆಲೆಸಿದ್ದರು. ಒಣಬಾಳೇ ದಿಂಡು ಸುಟ್ಟು ಕರೇ ಬಣ್ಣ ತಯಾರಿಸುತ್ತಿದ್ದು, ಬಾಳೇ ಬೂದಿ ಮನೆತನವೆಂದದ್ದು ಬೆಳಗಲಿ ಎಂಬ ಅಡ್ಡ ಹೆಸರಾಯಿತು. ತಾಯಿ ಜಾನಪದ ಕಥೆಗಳ ಹಾಡುಗಾರ್ತಿ. ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ ಶಾಲೆಯಲ್ಲಿ (1951-55) ಶಿಕ್ಷಕರಾದರು. ಬೆನ್ನ ಹಿಂದಿನ ಕಣ್ಣು ಪ್ರಥಮ ಕಥಾಸಂಕಲನ(1957) ಪ್ರಕಟ, ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಗೆ ಹಾಗೂ ಪ್ರಪಂಚ, ಜೀವನ ಪತ್ರಿಕೆಗಳಿಗೆ ಬರೆದರು. 1960 ರಲ್ಲಿ ಮೊದಲ ಕಾದಂಬರಿ ಮುಳ್ಳು ಮತ್ತು ಮಲ್ಲಿಗೆ ಪ್ರಕಟ.
ನಂತರ, ಸಾಹಿತ್ಯದ ಸುಗ್ಗಿ . ಸಿಟ್ಟ್ಯಾಕೋರಾಯ, ಮಾಸ್ತರನ ಹೆಂಡತಿ, ಗೌಡರ ಮಗಳು ಗೌರಿ, ಮುತ್ತಿನ ತೆನೆಗಳು ಒಟ್ಟು ಎಂಟು ಕಥಾ ಸಂಕಲನಗಳು. ಹತ್ತು ಹೆಡೆಯ ಹಾವು, ತಿರುಗಣಿಮಡು, ಹಡೆದವರು, ಕಾತ್ರಾಳ ರತ್ನಿ ಚಾದಂಗಡಿ ಒಟ್ಟು 15 ಕಾದಂಬರಿಗಳು. ಸರ್ವಜ್ಞ, ಬದುಕುವ ಬಯಕೆ, ಬೀರಬಲ್ಲ, ಜಾದುಪಕ್ಷಿ ಒಟ್ಟು 12 ಮಕ್ಕಳ ಸಾಹಿತ್ಯ ಕೃತಿ. ಚಿಕ್ಕೋಡಿ ಪಂಡಿತಪ್ಪನವರು, ಪ್ರೇಮಚಂದರ ಬದುಕು ಬರೆಹ, ನನ್ನ ಬಣ್ಣದ ಬದುಕು, ಆನಂದಕಂದ ಹೀಗೆ ಒಟ್ಟು 6 ಜೀವನ ಚರಿತ್ರೆಗಳು, ಹೆಂಡತಿ ಮತ್ತು ಟ್ರಾನ್ಸಿಸ್ಟರ್, ಗಂಡ-ಹೆಂಡತಿ-ಲಗ್ಗೇಜ್ ಮೊದಲಾದ ನಗೆ ಬರಹಗಳ ಸಂಕಲನ. ಐದು ಅನುವಾದ, ನಾಲ್ಕು ಪ್ರಬಂಧ ಸಂಕಲನ, ಐದು ಸಂಪಾದಿತ ಕೃತಿಗಳು ಸೇರಿ ರಚಿಸಿದ್ದು60ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.
ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಿರಿವಾರ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ ಆದರ್ಶ ಶಿಕ್ಷಕ ಪ್ರಶಸ್ತಿ, ಗಂಗಾಧರ ಸಾಹಿತ್ಯ ಪುರಸ್ಕಾರ, ವಿಶ್ವಭಾರತಿ ಸಾಹಿತ್ಯ ಪುರಸ್ಕಾರ, ಬಿ.ಎಚ್. ಶ್ರೀಧರ ಪ್ರಶಸ್ತಿ. ಸರ್.ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಪ್ರಮುಖ ಪ್ರಶಸ್ತಿಗಳು ಸಂದಿವೆ. ಇವರು 2000ರ ಜನೆವರಿ 08 ರಂದು ನಿಧನರಾದರು.