About the Author

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ರಾಧಾಕೃಷ್ಣ ಅವರು ದೇವುಡು ಅವರ ಗುರುಗಳಾಗಿದ್ದರು.

ಮೈಸೂರಿನ ಸದ್ವಿದ್ಯಾ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಬೆಂಗಳೂರಿಗೆ ಬಂದು ಆರ್ಯ ವಿದ್ಯಾಶಾಲೆಯನ್ನು ಸ್ಥಾಪಿಸಿದರು. ಬೆಂಗಳೂರಿನ ಗಾಂಧಿನಗರ ಪ್ರೌಢಶಾಲೆಯ ಸಂಸ್ಥಾಪಕ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. 'ನವಜೀವನ' ಪತ್ರಿಕೆಗೆ ಸಂಪಾದಕರಾಗಿದ್ದ ದೇವುಡು ಕಥೆಗಳನ್ನು ಧಾರಾವಾಹಿಯಾಗಿ ಕೊಡುವ ಪದ್ಧತಿಯನ್ನು ಆರಂಭಿಸಿದರು.’ರಂಗಭೂಮಿ’ ಪತ್ರಿಕೆಯ ಸಂಪಾದಕರಾಗಿದ್ದ ಅವರು ತಿರುಪ್ಪಾಣಿ, ಮಂಡೋದರಿ, ನಚಿಕೇತ ಮುಂತಾದ ನಾಟಕಗಳಲ್ಲಿ ನಟಿಸಿದ್ದರು. ’ಮಾರ್ಕಂಡೇಯ’ ಚಲನಚಿತ್ರದಲ್ಲಿ ನಟರಾಗಿ ನಟಿಸಿದ್ದಲ್ಲದೇ ಅವರು ಹಲವು ಚಿತ್ರಗಳಿಗೆ ನಿರ್ಮಾಪಕರೂ ಆಗಿದ್ದರು.  ಕೆಲ ಕಾಲ ಪುರಸಭೆಯ ಕೌನ್ಸಿಲರ್ ಆಗಿದ್ದ ಅವರು 1944, 46ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಜನಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ದೇವುಡು ಅವರು ಭೂಗಣಿ ವಿಜ್ಞಾನಿಯಾಗಿದ್ದರು. ಕಂಗುದಿಕುಪ್ಪಂ ಮಣ್ಣಿನಲ್ಲಿ ಹವಳಗಳ ಶೋಧನೆ ನಡೆಸಿದರು. ಬೆಂಗಳೂರಿನ ಆಗಿನ ಹೊರವಲಯದಲ್ಲಿ ಕಾಕಡಾ ಹೂವಿನ ತೋಟ ಮಾಡಿದ್ದರು.

ದೇವುಡು ಅವರು ಐವತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಮೂರು ಬೃಹತ್ ಕಾದಂಬರಿಗಳಾದ ಮಹಾಬ್ರಾಹ್ಮಣ, ಮಹಾಕ್ಷತ್ರಿಯ ಮತ್ತು ಮಹಾದರ್ಶನಗಳು ಕನ್ನಡ ಕಾದಂಬರಿ ಲೋಕದ ಮಹತ್ವದ ಕೃತಿಗಳು. ವೈದಿಕ ಕಾಲದ ಜನಜೀವನ ಈ ಕಾದಂಬರಿಗಳ ವಸ್ತು. ’ಮಹಾಬ್ರಾಹ್ಮಣ’ದಲ್ಲಿ ವಿಶ್ವಾಮಿತ್ರ ಕಥಾನಾಯಕನಾದರೆ, ’ಮಹಾಕ್ಷತ್ರಿ’ದಲ್ಲಿ ನಹುಷ ಹಾಗೂ ’ಮಹಾದರ್ಶನ’ದಲ್ಲಿ ಯಾಜ್ಞವಲ್ಕರನ್ನು ಕುರಿತ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದರು.

ಅವರು ರಚಿಸಿದ ’ಮಯೂರ’ ಕಾದಂಬರಿಯು ಚಲನಚಿತ್ರವಾಗಿ ಅಪಾರ ಜನಮನ್ನಣೆಗೆ ಪಾತ್ರವಾಯಿತು. ಸಾಹಸವರ್ಮ, ಕಳ್ಳರ ಕೂಟ, ಚಿನ್ನಾ, ಅಂತರಂಗ, ಗೆದ್ದವರು ಯಾರು ಇನ್ನಿತರ ಕಾದಂಬರಿಗಳು, ಮೂರು ಕನಸು, ಹೊಸಗನ್ನಡ ಪಂಚತಂತ್ರ, ವಾರದ ಕಥೆಗಳು ಕಥೆಗಳ ಸಂಕಲನಗಳು, ಕರ್ನಾಟಕ ಸಂಸ್ಕೃತಿ ಕುರಿತ ಅಪರೂಪದ ಕೃತಿ’ ಪ್ರೆಸ್ಸಿನ ವಿಚಾರಣೆ ಎಂಬ ನಾಟಕ ಹಾಗೂ ಮಕ್ಕಳಿಗಾಗಿ ಭಾರತೀಯ ಸಂಸ್ಕೃತಿ, ಖಗೋಳ ವಿಸ್ಮಯ, ಪುರಾಣಕತೆಗಳನ್ನು ಸರಳವಾದ ಕನ್ನಡದಲ್ಲಿ ವಿವರಿಸಿ ಕೃತಿ ರಚಿಸಿದ್ದರು. 24 ಸಂಪುಟಗಳ ಯೋಗವಾಸಿಷ್ಟ ಮತ್ತು ’ಮೀಮಾಂಸ ದರ್ಪಣ’ದ ಅನುವಾದ ಕನ್ನಡಕ್ಕೆ ದೇವುಡು ಅವರ ಅನನ್ಯ ಕೊಡುಗೆ. 1962 ರಲ್ಲಿ ದೇವುಡು ನಿಧನರಾದರು. ಅವರು ವಿಧಿವಶರಾದ ಕೆಲವೇ ದಿನಗಳ ನಂತರ ಅದೇ ವರುಷ ಅವರ 'ಮಹಾಕ್ಷತ್ರಿಯ' ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

 

ದೇವುಡು ನರಸಿಂಹಶಾಸ್ತ್ರಿಗಳು

(29 Dec 1886-27 Oct 1962)

Awards