ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ಅಂಕಣಗಳ ಸಂಗ್ರಹ. ‘ಆನಂದಕ್ಕೊಂದು ಮಿಸ್ಡ್ ಕಾಲ್’, ‘ಐ ಆಮ್ ಅನದರ್ ಯು’, ‘ಕಾಸ್ಮಿಕ್ ಜೋಕ್’ಇಂಗ್ಲಿಶ್‍ನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ’ ‘ಶಿವೋಹಮ್ ಶಿವೋಹಮ್’ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು. ‘ಬ್ಲಾಗಿಸು ಕನ್ನಡ ಡಿಂಡಿಮವ’ ಮತ್ತು ‘ಮುಸ್ಲಿಂ ಸಾಧಕರ ಕಿರುಪರಿಚಯ’ ಜಂಟಿಯಾಗಿ ಸಂಪಾದಿಸಿದ ಕೃತಿಗಳು. ಎಮ್‍ಆರ್‍ಪಿಎಲ್ ಮಾಲಿನ್ಯ ಮತ್ತು ಕಳಸಾ ಬಂಡೂರಿ ಯೋಜನೆ ಕುರಿತ ಸಾಕ್ಷ್ಯಚಿತ್ರಗಳಿಗೆ ಅಧ್ಯಯನ - ಬರಹ; ಉಪ್ಪಿನ ಕಾಗದ ಚಲನಚಿತ್ರಕ್ಕೆ ಎರಡು ಹಾಡುಗಳು ಮತ್ತು ಚಿತ್ರಕಥೆ - ಸಂಭಾಷಣೆ ವಿಭಾಗದಲ್ಲಿ ಸಹ ಬರಹಗಾರ್ತಿಯಾಗಿ ಕಾರ್ಯ ನಿರ್ವಹಣೆ; ಅವನವಳು – ಅವಳವನು ಮತ್ತು ಲಜ್ಜೆ ಪ್ರದರ್ಶನ ಕಂಡ ಅಪ್ರಕಟಿತ ನಾಟಕಗಳು. ಮೂಲತಃ ಕವಿ ಮತ್ತು ಬ್ಲಾಗರ್. 2005ರಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿ ಆರಂಭ. ಹತ್ತು ವರ್ಷಗಳ ಕಾಲ ವಿವಿಧ ಸುದ್ದಿ ಸಂಸ್ಥೆಗಳಲ್ಲಿ ಕೆಲಸ. ಕನ್ನಡ ಟೈಮ್ಸ್, ಅಗ್ನಿ, ಪ್ರಜಾವಾಣಿ ಪತ್ರಿಕೆಗಳಿಗೆ ಅಂಕಣ/ಲೇಖನ ಬರಹ. 2015ರಿಂದ ಫ್ರೀಲ್ಯಾನ್ಸ್ ಬರಹಗಾರ್ತಿಯಾಗಿ, ಅನುವಾದಕಿಯಾಗಿ ದುಡಿಮೆ. ‘ಮಾಧ್ಯಮ ನೆಟ್’ ಸಾಮಾಜಿಕ ಮತ್ತು ‘ಅರಳಿಮರ’ ಆಧ್ಯಾತ್ಮಿಕ ಜಾಲತಾಣಗಳ ನಿರ್ವಹಣೆ. ಅಧ್ಯಾತ್ಮ, ಮಹಿಳಾ ಅಧ್ಯಯನ, ಸಾಹಿತ್ಯ, ಸಿನೆಮಾ, ಚಿತ್ರಕಲೆ ಮತ್ತು ಸಮಾಜೋರಾಜಕೀಯ ವಿಶ್ಲೇಷಣೆ ಆಸಕ್ತಿಯ ಕ್ಷೇತ್ರಗಳು.