ಬಿ.ಕೆ.ತಿರುಮಲಮ್ಮ ಅವರು 22-11-22ರಲ್ಲಿ ಜನಿಸಿದರು. ಇದು ಸುಂದರ ಸಂಖ್ಯೆಯಲ್ಲವೇ? ಅವರು ಸಂಖ್ಯೆಗಳನ್ನು ಪ್ರೀತಿಸುತ್ತಿದ್ದರು. ಪ್ರತಿ ಮಗುವೂ ಶಾಲೆಗೆ ಹೋಗುವಂತಾಗಬೇಕು, ಸಂಖ್ಯೆಗಳು ಮತ್ತು ಪದಗಳ ಪ್ರಪಂಚದ ಪರಿಚಯ ಅವರಿಗೆ ಆಗಬೇಕು ಎಂದು ಬಯಸಿದ್ದರು.
ಆದ್ದರಿಂದ ಅವರು 1953ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಶಿಶು ವಿಹಾರವನ್ನು ಸ್ಥಾಪಿಸಿದರು. ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಸುಲಭವಾಗಿ ಕಲಿಸಲು ಅನೇಕ ಸರಳ ಪದ್ಯಗಳನ್ನು ಬರೆದರು. ‘ಕಂದಾ ಅಕ್ಷರ ಕಲಿ’ ‘ಕನ್ನಡ ಓದುವೆಯಾ’ ‘ನಮ್ಮ ಮನೆ’ ‘ಓದಿ ಕೇಳುವ ಕತೆಗಳು’ ‘ಪುಟಾಣಿಗಳ ವೈಜ್ಞಾನಿಕ ಕತೆಗಳು’ ‘ನಮ್ಮ ಬೆಂಗಳೂರು ಮತ್ತು ಪುಣ್ಯಕೋಟಿ’ ಇವು ಅವರ ಕೆಲವು ಕವಿತೆಗಳು. ಇವುಗಳನ್ನು ಈಗಲೂ ಅನೇಕ ಶಾಲೆಗಳಲ್ಲಿ ಬಳಸಲಾಗುತ್ತಿದೆ.
ತಿರುಮಲಮ್ಮ ಅವರು ಕಡಿಮೆ ಖರ್ಚಿನಲ್ಲಿ ಮಕ್ಕಳಿಗೆ ಕಲಿಸಲು ಬಳಸಿಕೊಳ್ಳಬಹುದಾದ ಪರಿಕರಗಳನ್ನು ವಿನ್ಯಾಸಗೊಳಿಸುತ್ತಿದ್ದರು. ತಮ್ಮ ಹಿರಿಯ ಶಿಕ್ಷಕರ ಜೊತೆಯಲ್ಲಿ ಅವರು ಈ ಪರಿಕರಗಳ ಬಳಕೆಯನ್ನು ಪ್ರದರ್ಶಿಸಲು ಗ್ರಾಮಗಳಿಗೆ ಹೋಗುತ್ತಿದ್ದರು. 1979ರಲ್ಲಿ ಅವರು ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಸಂಸ್ಥೆಯನ್ನು ಆರಂಭಿಸಿದರು.