ವಸುಧೇಂದ್ರ ಅವರು ಕನ್ನಡದ ಪ್ರಸಿದ್ಧ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು. ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆನಂತರ ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಯ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ.
ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಸದ್ಯಕ್ಕೆ ಸಾಹಿತ್ಯಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್, ಮೋಹನಸ್ವಾಮಿ, ವಿಷಮ ಭಿನ್ನರಾಶಿ, ಕೋತಿಗಲು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ವರ್ಣಮಯ, ಐದು ಪೈಸೆ ವರದಕ್ಷಿಣೆ, ಹರಿಚಿತ ಸತ್ಯ, ಮಿಥುನ, ತೇಜೋ ತುಂಗಭದ್ರಾ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ.
ಶ್ರೀಯುತರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ.ರಾ.ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಕ ಪ್ರಶಸ್ತಿ ಹಾಗೂ ಇವರ ತೇಜೋ ತುಂಗಭದ್ರಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಸಂದಿದೆ.