ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ಬಸವರಾಜ ದೇವರ ರಗಳೆ, ಸಿದ್ಧರಾಮಪುರಾಣ (ಡಿ.ಎಲ್.ಎನ್.ರೊಡನೆ) ಕರ್ನಾಟಕ ಕಾದಂಬರಿ, ಪಂಪಭಾರತ, ಕುಮಾರವ್ಯಾಸ ಭಾರತ, ಹರಿಶ್ಚಂದ್ರ ಕಾವ್ಯ’ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ವ್ಯಾಕರಣ ಹಾಗೂ ಕನ್ನಡ ಭಾಷಾ ಇತಿಹಾಸದ ಕನ್ನಡ ಕೈಪಿಡಿ, ಕನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು ಮುಂತಾದ ಕೃತಿಗಳು. ಅವರು 1939 ಫೆಬ್ರವರಿ 28 ರಂದು ನಿಧನರಾದರು.