ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ಬದುಕಿನ ನೈಜ ಚಿತ್ರಣವನ್ನು ನೀಡಿರುವ ‘ಹೊಸ ಹೆಜ್ಜೆ’ ಕಾದಂಬರಿಯು ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ಪಡೆದಿದ್ದು, ಧಾರವಾಹಿಯಾಗಿಯೂ ಮೆಚ್ಚುಗೆ ಗಳಿಸಿತು. ಈವರೆಗೆ “ತಸ, ಬಯಲುಭೂಮಿ, ಇದ್ದೂ ಇಲ್ಲದ ಸಂಬಂಧಗಳು, ಕೋಟೆ, ಬಯಲು ಆಲಯ” ಕೃತಿಗಳೂ ಸೇರಿದಂತೆ ಒಟ್ಟು 35 ಕಾದಂಬರಿಗಳು, 3 ಕಥಾಸಂಕಲನಗಳು, 3 ಗ್ರಂಥ ಸಂಪಾದನೆ ಮತ್ತು ಹಲವಾರು ಕವನಗಳು ಪ್ರಕಟವಾಗಿವೆ.
‘ಸದು ಎಂಬ ಬ್ರಹ್ಮಾಂಡ’ ಮತ್ತು ‘ಬದುಕು ಪಾರಿಜಾತದ ಹೂವಲ್ಲ’ ಕೃತಿಗಳು ಮರಾಠಿ ಭಾಷೆಗೆ ಅನುವಾದಗೊಂಡಿವೆ. ಅವುಗಳಲ್ಲಿ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಹಾವನೂರ ಸಾಹಿತ್ಯ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಶ್ರೀಮತಿ ಸುಧಾಮೂರ್ತಿ ಇನ್‌ಫೋಸಿಸ್ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು, ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ ಪ್ರಮುಖವಾದವು. ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜಾರಾಂ ಪ್ರಶಸ್ತಿ, ಎಸ್.ಆರ್. ಪಾಟೀಲ ಪ್ರತಿಷ್ಠಾನ ಪ್ರಶಸ್ತಿ, ಹಾವನೂರ ಸಾಹಿತ್ಯ ಪ್ರಶಸ್ತಿ, ಸುಧಾಮೂರ್ತಿ ಸಾಹಿತ್ಯ ಪ್ರಶಸ್ತಿ, ವಿಶ್ವಭಾರತಿ ಸಾಹಿತ್ಯ ಪುರಸ್ಕಾರ, ಗೀತಾದೇಸಾಯಿ ದತ್ತಿ ನಿಧಿ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ನವರತ್ನ ಸಾಹಿತ್ಯ ಪ್ರಶಸ್ತಿ, ಭಾರತಿಸುತ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಲ್ಲದೆ ನಾರ್ಥ್ ಕ್ಯಾಲಿಫೋರ್ನಿಯಾ ಕನ್ನಡ ಸಂಘ, ಮಿನಿಯಾ ಪೊಲೀಸ್ ಕನ್ನಡ ಸಂಘ, ಅಮೆರಿಕಾ ಮುಂತಾದ ವಿದೇಶಿ ಸಂಘ-ಸಂಸ್ಥೆಗಳಿಂದಲೂ ಸನ್ಮಾನಿತರಾಗಿದ್ಧಾರೆ..