About the Author

ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು, ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದವರು ಎನ್‌. ನರಸಿಂಹಯ್ಯ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. 18 -09-1925 ರಂದು ಜನನ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್‌ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೇ, ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ಕಾದಂಬರಿಯನ್ನೂ ಓದಿ ಪ್ರೇರೇಪಿತರಾಗಿ, ಪತ್ತೆದಾರಿ ಕಾದಂಬರಿ ರಚನೆಯಲ್ಲಿ ತೊಡಗಿದವರು. ಬಿಡುವಿನ ವೇಳೆಯಲ್ಲಿ ಸಿಕ್ಕಿದ ಪುಸ್ತಕಗಳನ್ನೂ ಓದುತ್ತಾ ಕೂಡುತ್ತಿದ್ದುದರಿಂದಲೇ ಇವರಲ್ಲಿ ಬರೆಯುವ ತುಡಿತ ಮೊಳಕೆಯೊಡೆಯಿತು. ಅವರ ಮೊದಲ ಪತ್ತೇದಾರಿ ಕಾದಂಬರಿ ’ಪುರುಷೋತ್ತಮನ ಸಾಹಸ’. ಪತ್ತೇದಾರನೊಬ್ಬನನ್ನೂ ಸೃಷ್ಟಿಸಿ ಬರೆದ ಈ ಕಾದಂಬರಿ ಬಲು ಬೇಗ ಜನಪ್ರಿಯತೆ ತಂದು ಕೊಟ್ಟಿತು.

ನಂತರ ಬರೆದ ಕಾದಂಬರಿ ‘ಭಯಂಕರ ಬೈರಾಗಿ’. ನರಸಿಂಹಯ್ಯನವರ ಕಾದಂಬರಿಗಳಿಗೆ ಬೇಡಿಕೆ ಪ್ರಾರಂಭವಾಗಿ ಏಕತಾನತೆಯನ್ನು ಮುರಿಯಲು ಪತ್ತೇದಾರಿ ಪುರುಷೋತ್ತಮನ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಕಾದಂಬರಿಗಳನ್ನೂ ರಚಿಸಿದ ನಂತರ, ಮಧುಸೂದನನ ಚತುರತೆಯನ್ನೂ ಓದುಗರಿಗೆ ಪರಿಚಯಿಸತೊಡಗಿದರು. ಇವನ ಹೆಸರಲ್ಲೂ ಕಾದಂಬರಿಗಳನ್ನೂ ಬರೆದ ನಂತರ, ಬಂದವ ‘ಅರಿಂಜಯ’ ಹಾಗೂ ಗಾಳಿರಾಯ. ಪತ್ತೇದಾರಿ ಪುರುಷೋತ್ತಮನ ಹೆಸರಿನಲ್ಲಿ ಬರೆದ ಪ್ರಮುಖ ಕಾದಂಬರಿಗಳೆಂದರೆ ಪತ್ತೇದಾರಿ ಪುರುಷೋತ್ತಮ , ವಿಚಿತ್ರ ಕೊಲೆಗಾರ, ಭಯಂಕರ ಬೈರಾಗಿ, ಮೃತ್ಯುವಿನೊಡನೆ ಹೋರಾಟ, ಕನ್ನಡಿಯ ಮುಂದೆ, ಹೊಸಲು ದಾಟದ ಗಂಡು, ಸಾವಿನ ಸೋಲು, ಮಿತ್ರದ್ರೋಹಿ, ರಾಣಿವಾಸದ ರಹಸ್ಯ, ಸಂಶಯದ ಸುಳಿಯಲ್ಲಿ, ಸೇಡಿನ ಸರ್ಪ, ಗಿಣಿಕಚ್ಚಿದ ಹಣ್ಣು, ಬೀದಿಯ ಪಾರಿವಾಳ, ಎರಡು ತಲೆ ಹಾವು, ಕಾಮದ ಗೊಂಬೆ, ಕಲಿಯುಗದ ಪಾಂಚಾಲಿ, ಕಾರ್ಮುಗಿಲ ಕತ್ತಲಲ್ಲಿ, ಪೂಜಾರಿಯ ಪುಂಡಾಟ ಮುಂತಾದವುಗಳು. ಮಧುಸೂದನನ ಚತುರತೆಯಲ್ಲಿ ಪತ್ತೇದಾರ ಮಧುಸೂದನ, ವಿಚಿತ್ರವಿಲಾಸಿನಿ, ಜಾದೂಗಾರ ಜಗದೀಶ, ಮಾಟಗಾತಿಯ ಮಗಳು, ಅವಳಿ ಜವಳಿ, ನೀಲಿಬಣ್ಣದ ಕೋಟು ಮೊದಲಾದವು.

ನಂತರ ಬಂದ ಅರಿಂಜಯನ ವಿಕ್ರಮಗಳೆಂದರೆ ಪತ್ತೇದಾರ ಅರಿಂಜಯ, ಭೂಪತಿರಂಗ, ಮಸಣದಿಂದ ಮನೆಗೆ, ಪ್ರೇಮರಹಸ್ಯ, ಮೂಕರ್ಜಿ ಪತ್ರಗಳು. ಇದಾದ ನಂತರ ಬಂದ ಗಾಳಿರಾಯನ ಮಹತ್ಸಾಧನೆ ಎಂದರೆ ಪತ್ತೇದಾರ ಗಾಳಿರಾಯ ಮೊದಲಾದವುಗಳು. ಅಪರಾಧ ಜಗತ್ತಿನ ವಿವಿಧ ಮೂಲೆಗಳನ್ನೂ ಶೋಧಿಸಿ ಅಪರಾಧಿಯ ಜಾಣಾಕ್ಷತೆಯನ್ನೂ ಒಂದೆಡೆ ಪ್ರತಿಬಿಂಬಿಸುತ್ತಾ ಬಂದರೂ ಕಾನೂನು ಬದ್ಧ ಹಾಗೂ ನೈತಿಕ ಜಗತ್ತಿಗೆ ಗೆಲುವು ಎಂಬುದೇ ಇವರ ಪತ್ತೇದಾರಿ ಕಾದಂಬರಿಗಳ ಆಶಯವಾಗಿರುತ್ತಿದ್ದುವು. ಇದಲ್ಲದೆ, ಇವರು ಬರೆದ ಸಾಮಾಜಿಕ ಕಾದಂಬರಿಗಳೆಂದರೆ ಮುತ್ತುಗದ ಹೂ, ಹಾದಿ ತಪ್ಪಿದ ಹೆಣ್ಣು, ಜೀವನ ಸಂಗಾತಿ, ಪಂಚವರ್ಣದ ಗಿಣಿ’ ಮೊದಲಾದವು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ.

ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ (1992), ರಾಜ್ಯೋತ್ಸವ ಪ್ರಶಸ್ತಿ (1997), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (2006) ಸಂದಿವೆ. ಎನ್. ನರಸಿಂಹಯ್ಯನವರು 2011ರ ಡಿಸೆಂಬರ್ 25ರಂದು ನಿಧನರಾದರು. 

 

ಎನ್. ನರಸಿಂಹಯ್ಯ

(18 Sep 1925-25 Dec 2011)

ABOUT THE AUTHOR