ಕ್ರಿ.ಶ. 1904 ಜೂನ್ ತಿಂಗಳಲ್ಲಿ , ಎನ್ . ಅನಂತರಂಗಾಚಾರ್, ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ತಂದೆ ಶ್ರೋತ್ರೀಯ ಬ್ರಾಹ್ಮಣ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ ಕಲಿಸಿದರು .ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ, ನಂತರ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು .ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿದರು .1924ರಲ್ಲಿ ಬಿ.ಎ. ಪದವೀಧರರು.
ಮುಂದೆ ಆಚಾರ್ಯರು ಎಂ.ಎ. ಪಾಸಾದರು. 1930ರಲ್ಲಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪಂಡಿತರಾಗಿ ಸೇರಿದರು . ಕುಮಾರವ್ಯಾಸಭಾರತದ ಯುದ್ಧಪಂಚಕವನ್ನು ಸಂಶೋಧಿಸಿ ಪ್ರಕಟಿಸಿದರು . ನಂಜುಂಡ ಕವಿಯ 'ಕುಮಾರ ರಾಮ ಸಾಂಗತ್ಯ'ವನ್ನು ಮುದ್ರಣಕ್ಕೆ ಸಿದ್ದಪಡಿಸಿದರು. ಆಚಾರ್ಯರು ಕೈಗೂಂಡ ಕೈಬರಹದ ಪುಸ್ತಕಾನ್ವೇಷಣೆಯ ಕೆಲಸ ಅವರ ಜೀವನದಲ್ಲಿ ಮಾತ್ರವಲ್ಲ ಇಡೀ ಕನ್ನಡದ ಸಾಹಿತ್ಯದ ದೃಷ್ಟಿಯಿಂದಲೇ ಅತಿ ಮಹತ್ವದ್ದು.
ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ , ಮಲ್ಲಿಕಾರ್ಜುನ ಸೂಕ್ತಿ ಸುಧಾರ್ಣವ ಮತ್ತು ಮಲ್ಲ ಕವಿಯ ಕಾವ್ಯಸಾರ, ಉಪಲಬ್ಧವಿದ್ದ 35 ಮುದ್ರಿತ ಮತ್ತು ಅಮುದ್ರಿತ ಕೃತಿಗಳ ಆಕಾರಾದಿಗಳನ್ನು ತಯಾರಿಸಿ ಅವುಗಳೊಡನೆ ತುಲನೆಮಾಡಿ ಆಕರಗಳನ್ನು ತಯಾರಿಸಿದ್ದಾರೆ. ಆಕರ ಸಿಕ್ಕದಿರುವ 2500 ಪದ್ಯಗಳನ್ನು ಗುರುತಿಸಿದ್ದಾರೆ . ಈ ಪದ್ಯಗಳು ಕನ್ನಡವು ಕಳಕೊಂಡಿರುವ ಸಾಹಿತ್ಯದ ಅಗಾಧತೆಯನ್ನು ತೋರಿಸುತ್ತದೆ. 'ಕನ್ನಡ ಚಂಪೂಕಾವ್ಯಗಳ ಪದ್ಯಾನುಕ್ರಮಣಿಕೆ' ಎಂಬ ಮತ್ತೊಂದು ದೊಡ್ಡ ಗ್ರಂಥವನ್ನು ರಚಿಸಿದ್ದಾರೆ .
ಭಾಷಾ ಸಾಹಿತ್ಯ ಚರಿತ್ರೆ ಎಂಬುದು ಇವರ ಮತ್ತೊಂದು ಮಹತ್ವದ ಕೃತಿ. ಭಾರತದ ಇಪ್ಪತ್ತು ಅಧಿಕೃತ ಭಾಷೆಗಳ ಸಾಹಿತ್ಯ ಚರಿತ್ರೆ ಅಡಕವಾಗಿದೆ. ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಚರಿತ್ರೆಗಳ ವಿಸ್ತಾರ ಪರಿಶೀಲನೆ ಇದೆ. 28-10-1997 ರಂದು ನಿಧನರಾದರು.