ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ 1915ರ ಜನೆವರಿ 26ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ. 22ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದ್ದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು 1970ರ ಜನೆವರಿ 26ರಂದು ನಿವೃತ್ತರಾಗಿದ್ದರು.
ಮೈಸೂರ ಮಲ್ಲಿಗೆ (1942) ಪ್ರಕಟವಾದಾಗಿನಿಂದ 25ಕ್ಕೂ ಹೆಚ್ಚು ಮುದ್ರಣ ಕಂಡಿದೆ. ಅನಂತರ ಹತ್ತಾರು ಕವನ ಸಂಕಲನಗಳ ಮೂಲಕ ನವೋದಯ ಮತ್ತು ನವ್ಯಕವಿತೆಗಳನ್ನು ತಮ್ಮದೇ ಆದ ಛಾಪಿನಲ್ಲಿ ಕನ್ನಡಕ್ಕೆ ಕೊಟ್ಟಿದ್ದಾರೆ. ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ ಕೃತಿಗೆ ದೇವರಾಜ ಬಹಾದ್ದೂರ್ ಬಹುಮಾನ (1943), ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಇಲಾಖೆಯ ಬಹುಮಾನ (1957), ತೆರೆದ ಬಾಗಿಲು ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1977), ‘ದುಂಡು ಮಲ್ಲಿಗೆ’ ಕವನ ಸಂಕಲನಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿ (1966), ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ (1987) ದೊರೆತಿದ್ದವು. ಬೆಂಗಳೂರು ವಿಶ್ವವಿದ್ಯಾಲಯವು ೧೯೯೨ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ (1992), ಮಾಸ್ತಿ ಸಾಹಿತ್ಯ ಪ್ರಶಸ್ತಿ (1996) ಸಂದಿದ್ದವು. ಮೈಸೂರಿನಲ್ಲಿ ನಡೆದ 60ನೇ ಕನ್ನಡ ಸಾಹಿತ್ಯ ಸಮ್ಮೇಳನ (1992) ಅಧ್ಯಕ್ಷರಾಗಿದ್ದರು. ಕೆ.ಎಸ್. ನರಸಿಂಹಸ್ವಾಮಿ ಅವರು 2003ರ ಡಿಸೆಂಬರ್ 28ರಂದು ಬೆಂಗಳೂರಿನಲ್ಲಿ ನಿಧನರಾದರು.
ಕವನ ಸಂಕಲನಗಳು: ಮೈಸೂರ ಮಲ್ಲಿಗೆ, ದೀಪದಮಲ್ಲಿ (1947), ಉಂಗುರ (1949), ಇರುವಂತಿಗೆ (1952), ಮನೆಯಿಂದ ಮನೆಗೆ (1960), ತೆರೆದ ಬಾಗಿಲು (1977), ದುಂಡು ಮಲ್ಲಿಗೆ (1993), ನೆಲದನಿ (1999), ಸಂಜೆಹಾಡು (2000)
ಗದ್ಯಕೃತಿಗಳು : ಮಾದರಿಯ ಕಲ್ಲು (1942), ಉಪವನ (1958), ದಮಯಂತಿ (1970). ಇಂಗ್ಲಿಷಿನಿಂದ ಅನುವಾದಗಳು : ಯೂರಿಪಿಡೀಸಿನ ಮೀಡಿಯಾ (1966), ಸುಬ್ರಹ್ಮಣ್ಯ ಭಾರತಿ (1971), ಮಾಯಾಶಂಖ ಮತ್ತು ಇತರ ಕಥೆಗಳು (1972), ರಾಣಿಯ ಗಿಳಿ ಮತ್ತು ರಾಜನ ಮಂಗ (1972), ಹಕಲ್‍ಬರಿಫಿನ್ನನ ಸಾಹಸಗಳು (1969) ಇತ್ಯಾದಿ.