'ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ' ಕೃತಿಗಾಗಿ ಪಿಎಚ್.ಡಿ ಪದವಿ ಪಡೆದ ಇಂದಿರಾ ಹೆಗ್ಗಡೆ ಅವರ ಆಸಕ್ತಿಯ ಕ್ಷೇತ್ರ ತುಳು ಸಂಸ್ಕೃತಿ. ಕನ್ನಡ ಮತ್ತು ತುಳು ಸೃಜನಶೀಲ ಸಾಹಿತ್ಯದಲ್ಲೂ ಕೈಯಾಡಿಸಿದವರು ಅವರು.
ದಕ್ಷಿಣ ಕನ್ನಡದ ಕಿನ್ನಿಗೋಳಿ ಎಳತ್ತೂರು ಗುತ್ತಿನವರಾದ ಇಂದಿರಾ ಅವರು ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ, ಚೇಳಾರು ಗುತ್ತು ಅಗೊಳಿ ಮಂಜಣ್ಣ ಕುರಿತು ಸಂಶೋಧನೆ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನ ಕೃತಿಗಳು ತುಳು ಜನಪದ ಸಾಹಿತ್ಯವನ್ನು ಪರಿಚಯಿಸುತ್ತವೆ.
ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನಗಳು, ಬದಿ, ಬದುಕು ಇವು ಅವರ ಕಥಾ ಸಂಕಲನಗಳು. ತುಳು ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಅವರನ್ನು ಅರಸಿ ಬಂದಿವೆ.
ಪ್ರಶಸ್ತಿಗಳು: 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ