About the Author

ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ. 

ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು.

ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ : ಶತಾಬ್ದಿ ದೀಪ, ಜಂಗಮಜ್ಯೋತಿ, ಇತ್ಯಾದಿ.

ಪರಿಷತ್ತಿಗೊಂದು ಧ್ವಜ : ಬಿ.ಎಂ.ಶ್ರೀ. ಅವಧಿಯಲ್ಲಿ ಒಂದು ಲಾಂಛನ ರೂಪಿಸಿ ಅಂಗೀಕರಿಸಿತ್ತು ಆದರೆ ಧ್ವಜದ ಅಗತ್ಯ ಕಂಡು ಸಿದ್ಧಲಿಂಗಯ್ಯನವರು ತಜ್ಞರ ಸಮಿತಿ ನೇಮಿಸಿತು. ಧ್ವಜದ ಸ್ವರೂಪ ಲಕ್ಷಣಗಳನ್ನು ನಿರ್ಧರಿಸಿತು. ಕಲಾವಿದ ಕಮಲೇಶ್ ಅವರಿಗೆ ಧ್ವಜರೂಪಿಸುವ ಕಾರ್ಯ ವಹಿಸಿತು. ಅದನ್ನು ಕಾರ್ಯಸಮಿತಿ 16-01-1990 ರಲ್ಲಿ ಅಂಗೀಕರಿಸಿತು. ಅಂದಿನಿಂದ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಮುಖ ಸಮಾರಂಭಗಳಲ್ಲಿ ಹಾರಿಸಲು ಪ್ರಾರಂಭಿಸಿತು.

ಪ್ರಕಟಣೆಗಳು :. ಆಧುನಿಕ ಸಾಹಿತ್ಯದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ ಮಹನೀಯರು ನಮ್ಮಲ್ಲಿ ಅನೇಕರಿದ್ದಾರೆ. ಅವರೆಲ್ಲರನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಹೊಸಗನ್ನಡ ಸಾಹಿತ್ಯ ದನಿ ನಿರ್ಮಾಪಕರು ಮಾಲಿಕೆಯಡಿ ಪ್ರಸಿದ್ಧ ಲೇಖಕರಿಂದ ಬರೆಸಿ ಪ್ರಕಟಿಸಿದರು.ನೂರಾರು ಪಿಎಚ್.ಡಿ., ಗ್ರಂಥಗಳು ಅಪ್ರಕಟಿತವಾಗಿ ಉಳಿದಿದೆ. ಉತ್ತಮ ವಿಚಾರಗಳು ಸಂಶೋಧನಾತ್ಮಕ ವಿವರಗಳಿರುವ ಇಂಥ ಪ್ರಬಂಧಗಳನ್ನು ಪ್ರಕಟಿಸುವ ಯೋಜನೆಯನ್ನು ತಯಾರಿಸಿ, ಸಂಗ್ರಹರೂಪದಲ್ಲಿ ಹತ್ತಾರು ಪ್ರಬಂಧಗಳು ಪರಿಷತ್ತಿನಿಂದ ಪ್ರಕಟವಾಯಿತು. ಹೊಸದಾಗಿ ಅಕ್ಷರ ಕಲಿತ ವಯಸ್ಕರಿಗಾಗಿ ಪ್ರಾರಂಭಿಸಿದ ನವಸಾಕ್ಷರಮಾಲಿಕೆಯಲ್ಲಿ ೩0 ಗ್ರಂಥಗಳು ಬೆಳಕು ಕಂಡವು.

ಪರಿಷತ್ತಿನ ಗೌರವ ಸದಸ್ಯತ್ವ ಪಡೆದ ಸಿಂಪಿ ಲಿಂಗಣ್ಣನವರ ಗೌರವಾರ್ಥ ಪ್ರಾತಿನಿಧಿಕ ಕೃತಿ ‘ಸಾಗರಸಿಂಪಿ’ ಪ್ರಕಟವಾಯಿತು. ರಾಜ್ಯೋತ್ಸವ, ಯುಗಾದಿಯಂದು ಕವಿಗೋಷ್ಠಿ ಏರ್ಪಡಿಸುವ ಪದ್ಧತಿ ಪ್ರಾರಂಭಿಸಿದರು. ಪರಿಷತ್ತಿನ ಕನ್ನಡನುಡಿಯ ಸುವರ್ಣ ಸಂಚಿಕೆಯನ್ನು ಹೊರತಂದರು.

ನಿಘಂಟು ಮಾರಾಟ : ಪರಿಷತ್ತಿನ ಪ್ರಕಟನೆಯಾದ ಕನ್ನಡ ನಿಘಂಟು ಸಂಪುಟಗಳನ್ನು ಪರಿಷತ್ತಿಗೆ ತರಿಸಿ ಮಾರಾಟ ಮಾಡಲಾಯಿತು. ಇದರಿಂದ ಒಂದೂವರೆ ಲಕ್ಷದಷ್ಟು ಹಣ ಸಂಗ್ರಹವಾಯ್ತು.

ಬಂಡಾಯ ಸಮ್ಮೇಳನ : ಬಂಡಾಯ ಸಾಹಿತ್ಯ ಚಳವಳಿಯ ಬರಹಗಾರರು ಪರಿಷತ್ತಿನಿಂದ ದೂರವಿದ್ದುದನ್ನು ಕಂಡು ಸಿದ್ಧಲಿಂಗಯ್ಯನವರು ಆ ಚಳವಳಿಯ ಸಾಹಿತಿಗಳನ್ನೆಲ್ಲ ಕರೆಯಿಸಿ, (30-6-1990 ಹಾಗೂ 01-07-1990) ಎರಡು ದಿನಗಳ ಕಾಲ ಸಾಹಿತ್ಯ ಸಮಾವೇಶ ಪರಿಷತ್ತಿನಲ್ಲಿ ಏರ್ಪಡಿಸಿದರು. ನಿಬಂಧನೆಗಳ ತಿದ್ದುಪಡಿ : ಮಹಾರಾಷ್ಟ್ರ ಕೇರಳಗಳಲ್ಲಿ ಪರಿಷತ್ತಿನ ವಿಶೇಷ ಘಟಕಗಳು ಸ್ಥಾಪನೆಯಾಗಲು ಅವಕಾಶವಾಯಿತು. 100ಕ್ಕಿಂತ ಹೆಚ್ಚು ಮತದಾರರಿರುವ ಹೊರನಾಡಿನ ಪ್ರದೇಶಗಳಲ್ಲಿ ಪರಿಷತ್ತಿನ ವಿಶೇಷ ಘಟಕಗಳ ಸ್ಥಾಪನೆ, 50ಕ್ಕಿಂತ ಹೆಚ್ಚು ಮತದಾರರಿದ್ದರೆ ಮತದಾನ ಕೇಂದ್ರ ನಿರ್ಮಾಣಕ್ಕೆ ಅವಕಾಶ, ತಾಲ್ಲೂಕು ಘಟಕ ಸ್ಥಾಪನೆ, ಇವೇ ಮೊದಲಾದ ತಿದ್ದುಪಡಿಗಳು ಜಾರಿಗೆ ಬಂದವು.

 

ಜಿ. ಎಸ್. ಸಿದ್ಧಲಿಂಗಯ್ಯ

(20 Feb 1931)