1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು.
ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು (ಸಹಲೇಖಕ: ಕೆ. ಫಣಿರಾಜ್), ಬಹುವಚನ ಭಾರತ.
ಜಿ. ರಾಜಶೇಖರ ಅವರು ಅನಾರೋಗ್ಯದ ಕಾರಣದಿಂದ ಜುಲೈ 20, 2022ರ ಬುಧವಾರದಂದು ನಿಧನರಾದರು.