ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್ ಹೆರಲ್ಡ್ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನಮ್ಮ ಶಿಡ್ಲಘಟ್ಟ, ಕ್ಲಿಕ್, ಭೂತಾನ್, ಅರೆಕ್ಷಣದ ಅದೃಷ್ಟ, ರಸ್ಕಿನ್ ಬಾಂಡ್ ಕತೆಗಳು, ಯೋರ್ಡಾನ್ ಪಿರೆಮಸ್- ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಯೋರ್ಡಾನ್ ಪಿರೆಮಸ್ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.