ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು.
’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ನಾಟಕಗಳನ್ನಾಧರಿಸಿ ಚಲನಚಿತ್ರಗಳಾದುವುಗಳು ಬೆಂಗಳೂರಿನ ಸೌತ್ ಇಂಡಿಯನ್ ಮೂವಿಟೋನ್ ಸಂಸ್ಥೆಯಿಂದ ಸತೀ ಸುಲೋಚನ, ಕೊಯಮತ್ತೂರಿನ ಶಕುಂತಳಾ ಫಿಲ್ಸ್ಮಂ ಅವರಿಂದ ಸದಾರಮೆ, ಸೇಲಂನ ದೇವಿ ಫಿಲ್ಸ್ಮಂ ಅವರಿಂದ ಪುರಂದರದಾಸ, ಮದರಾಸಿನ ಕಲೈವಾಣಿ ಫಿಲ್ಸ್ಮಂ ಅವರಿಂದ ಪ್ರಹ್ಲಾದ, ಕೃಷ್ಣಸುಧಾಮ, ಗುಬ್ಬಿ ವೀರಣ್ಣನವರಿಂದ ಹೇಮರೆಡ್ಡಿ ಮಲ್ಲಮ್ಮ, ಸುಭದ್ರಾ ಪರಿಣಯ ಚಲನಚಿತ್ರಗಳಾದುವು. ಹಿಸ್ಮಾಸ್ಟರ್ ವಾಯ್ಸ್ ಕಂಪನಿ ಕೃಷ್ಣಗಾರುಡಿ ನಾಟಕವನ್ನು ರೆಕಾರ್ಡ್ ಮಾಡಿ ಬಿಡುಗಡೆ ಮಾಡಿತು. ಹಲವಾರು ಹಾಸ್ಯ ಪ್ರಹಸನಗಳ ರೆಕಾರ್ಡಿಂಗ್-ನಸ್ಯದ ನಾಗಂಭಟ್ಟ, ರೈತನ ಫಿರ್ಯಾದು, ಭೂಪತಿರಂಗ ಸೇಡಿನ ನೋಟು ಸೆಟ್ಟಿಏಟು, ಅತಿಥಿ ಸತ್ಕಾರ, ಗೆದ್ದವರು ಯಾರು, ರೂಪಾಯಿನ ಮಳೆ ಮುಂತಾದುವು.
ಇವರ ಸಾಹಿತ್ಯ ಸೇವೆಯನ್ನು ಗುರುತಿಸಿದ ಕರ್ನಾಟಕದ ಜನತೆ ಕೊಟ್ಟ ಬಿರುದು ‘ಕರ್ನಾಟಕ ಕವಿ ಕೇಸರಿ.’ ಶ್ರೀ ಜಯರಾಮರಾಜ ಒಡೆಯರ್’ ಅವರಿಂದ ‘ಆಸ್ಥಾನ ವಿದ್ವಾನ್’ ಪದವಿಯ ಗೌರವವು ಸಂದಿತು. 1961 ಜೂನ್ 21 ರಂದು ನಿಧನರಾದರು.