ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.
ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ಉದಯವಾಣಿ, ಹೊಸದಿಗಂತ, ವಿಜಯ ಕರ್ನಾಟಕ, ಅಭಿಯಾನ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು ಹನಿಗವನ ಹಾಸ್ಯ ಲೇಖನಗಳನ್ನೂ ಬರೆದಿದ್ದು ಅವು ಸುಧಾ, ತರಂಗ, ತುಷಾರಗಳಲ್ಲಿ ಪ್ರಕಟವಾಗಿವೆ. ಐದು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಹಾಗೂ ಹಲವು ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಅವರು 'ಉತ್ತರವೇ ಪ್ರಶ್ನೆ' ಹಾಗೂ 'ಸತ್ಯವತಿ' ಎಂಬ ಎರಡು ನಾಟಕಗಳನ್ನು ರಚಿಸಿ ತಾವೇ ನಿರ್ದೇಶಿಸಿದ್ದಾರೆ.
ಗಿರಿಲಹರಿ ಅಂಕಣ ಬರೆಹದಿಂದ ಜನಪ್ರಿಯತೆ ಗಳಿಸಿದರು. ಅಸತ್ಯ ಅಥವಾ ಸತ್ಯ ಸೇರಿದಂತೆ 16ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಲಂಡನ್ ನಲ್ಲಿ ಡಾ.ಎಸ್.ಎಲ್. ಭೈರಪ್ಪ ಅವರೊಂದಿಗೆ ನಡೆದ ಸಾಹಿತ್ಯ ಚರ್ಚೆಯಲ್ಲಿ ಗಿರೀಶ್ ಭಟ್ ಅವರು ಕೃತಿ ಅವಲೋಕನ ನಡೆಸಿದ್ದರು.
ಅಜಕ್ಕಳ ಗಿರೀಶ ಭಟ್ ಅವರ ಬದುಕಿನ ನೋಟಗಳ ಕುರಿತಾದ ವಿಶೇಷ ಸಂದರ್ಶನ ಮುಖಾ-ಮುಖಿಯಲ್ಲಿ... ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ಅಪರೂಪದ ಮಾತುಕತೆ ಇಲ್ಲಿದೆ ನೋಡಿ.