Article

 ‘ಅಲೆವ ನದಿ’ಯ ಅಂತಃಕರಣದ ದನಿ

ಕವಿಯಾದವನು ತನ್ನ ಸುತ್ತಣ ವಸ್ತು ಪ್ರಪಂಚ, ಸಂಗತಿ, ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದಕ್ಕೆ ಮಾತು ಕೊಡುವ ಗುಣವನ್ನು ಹೊಂದಿರುತ್ತಾನೆ. ಇದನ್ನೇ ನಾವು ಕಾವ್ಯ ಕ್ರಿಯೆ ಎನ್ನುತ್ತೇವೆ. ಒಂದರ್ಥದಲ್ಲಿ ಕಾವ್ಯವೆಂದರೆ ಬಾಹ್ಯ ಲೋಕದ ಕುರಿತಾಗಿ ಕವಿಯ ಅಂತರಂಗದಲ್ಲಿನ ಎಲ್ಲವೂ ಸೇರಿ, ವಸ್ತು ಸ್ಥಿತಿಗೆ ಪ್ರತಿಕ್ರಿಯಾತ್ಮಕವಾಗಿ ಹೊರಗಿನ ಅಭಿವ್ಯಕ್ತಿಯಾಗುವುದು. ಇದು ಬರಹಗಾರನ ಸಮಾಧಾನಕ್ಕೆ ದಾರಿ ಮಾಡಿಕೊಡುವಂಥ ಸೃಜನಶೀಲ ಪ್ರಕ್ರಿಯೆ. ಆದರೆ, ಕಾವ್ಯದ ಇನ್ನೊಂದು ಮಜಲು ಎಂದು ಎಂದು ಕರೆಯಬಹುದಾದ ‘ಗಜಲ್’ ಮೂಲಕ ಲೋಕದ ಸಂಗತಿಗಳಿಗೆ ದನಿಯಾಗುವುದು ಸುಲಭದ ಮಾತಲ್ಲ! ನಮಗೆ ಲೋಕ ನೋಡುವ ಕಲೆ ಗೊತ್ತಿದ್ದಲ್ಲಿ ಅನಾಯಸವಾಗಿ ಕವಿಯಾಗಬಹುದು. ಆದರೆ, ‘ಗಜಲ್ ಕವಿ’ಯಾಗುವುದು ಅಷ್ಟು ಸರಳವಲ್ಲ! ಏಕೆಂದರೆ ’ಕವಿತೆ’ಯಂತೆ ‘ಗಜಲ್’ ಸುಲಭವಾಗಿ ಒಲಿದು ಬರುವುದಿಲ್ಲ. ‘ಗಜಲ್’ ಕಟ್ಟುವ ಕ್ರಮವನ್ನು ಆಳವಾಗಿ ಅಭ್ಯಸಿಸದ ಹೊರತು ಅದು ಕೈ ವಶವಾಗುವುದಿಲ್ಲ. ಹೀಗಾಗಿ, ‘ಗಜಲ್ ಕವಿ’ಯಾಗುವುದು ಕಷ್ಟ ಎನ್ನಬೇಕು. ‘ಗಜಲ್’ ಮೂಲತಃ ಅರಬ್ಬಿ- ಪಾರ್ಸಿ ಭಾಷೆಯಿಂದ ಬಂದು ಉರ್ದುವಿನ ಮೂಲಕ ಜನಪ್ರಿಯಗೊಂಡು ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಯೋಗ ಕಂಡ ಪ್ರಕಾರ. ಕವಿಯಾದವನಿಗೆ ’ಗಜಲ್’ ಮೂಲಕ ಭಾವನೆಗಳನ್ನು ಅಭಿವ್ಯಕ್ತಿಸಲು ಕೆಲವು ಅರ್ಹತೆಗಳು ಬೇಕು. ಸಿದ್ಧ ಚೌಕಟ್ಟುಗಳನ್ನು ಮೀರಿ ಒಳ ಪ್ರವೇಶಿಸಬೇಕು. ಆಗ ಮಾತ್ರ’ಗಜಲ್ ಕಾವ್ಯ’ ಒಲಿಯುತ್ತದೆ. ಪ್ರಸ್ತುತ ಕವಿ ಗಿರಿಯಪ್ಪ ಕಿರಸೂರ ಅವರ ‘ಅಲೆವ ನದಿ’ ಗಜಲ್ ಸಂಕಲನದಲ್ಲಿನ ಗಜಲ್ ಗಳು ಲೌಕಿಕ ಬದುಕಿನ ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾದ ವಿಚಾರಗಳನ್ನು ಮೂಲ ದ್ರವ್ಯವಾಗಿಸಿಕೊಂಡಿವೆ. ಈ ಸಂದರ್ಭದ ಸಂವೇದನೆಗಳಿಂದ ಏಕಾಂತವಾಗಿ ಉಳಿಯಲಾಗದ ಗಿರಿಯಪ್ಪ ಅವರು ಮನುಷ್ಯ ಮತ್ತು ಮನುಷ್ಯೇತರ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಗಜಲ್ ಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಗಜಲ್ ಸಂಕಲನದಲ್ಲಿನ ‘ಬತ್ತಿದ ಬಾವಿದಂಡ್ಯಾಗ’ ಎಂಬ ಗಜಲ್, ಬಯಲು ಸೀಮೆಯ ಜನರು ಸುಡು ಸುಡುವ ನೆಲದ ಮೇಲಿನ ಕಲ್ಲೂ ಸಹ ಕರಗಿ ಹೋಗುವಂತೆ ಸುರಿವ ಬಿಸಿಲು ಕಾರಣವಾಗಿ ಅನುಭವಿಸುವ ನೋವು, ಸಂಕಟ, ಹತಾಶೆಗಳೊಂದಿಗೆ ಅವರು ಬದುಕನ್ನು ಮುನ್ನಡೆಸುವ ವಿಚಾರದಲ್ಲಿ ಆ ಬಿರು ಬಿಸಿಲು ಆಗಾಗ ತಂದೊಡ್ಡುವ ಸವಾಲುಗಳು ಎಂಥವು ಎಂಬುದನ್ನು ವಿವರಿಸುತ್ತದೆ. ಇಲ್ಲಿ, ಯಾವತ್ತಿಗೂ ಸುರಿಯುವ ಬಿಸಿಲು ಬರೀ ಬಿಸಿಲಾಗಿರದೇ ಆಗಸದಿಂದ ಬಿಡದೇ ಸುರಿಯುವ ಅಗ್ನಿ ಗೋಲಗಳಿಂದ ಒಸರುವ ಬಿಸಿ ಲಾವಾರಸವೇ ಆಗಿರುತ್ತದೆ! ಅದಕ್ಕೇ, ಇಂಥ ಬಿಸಿಲನ್ನೇ ಉಂಡುಟ್ಟು ಬದುಕುತ್ತಿರುವ ಕವಿಯು ಗಜಲ್ ನ ಉದ್ದಕ್ಕೂ ಈ ಭಾಗದ ನಿರ್ಭಾಗ್ಯ ಜನರು ನಿತ್ಯ ಅನುಭವಿಸುವ ಸಂಕಟಗಳೊಂದಿಗೆ ಮುಖಾಮುಖಿಯಾಗಿಸುತ್ತಾನೆ:

                                ಬತ್ತಿದ ಬಾವಿದಂಡ್ಯಾಗ ಗುಬ್ಬಚ್ಚಿಗಳ ಪಾದ ನಲುಗ್ಯಾದೊ

                                 ಬ್ಯಾಸಗಿ ಹೊಡೆತಕ್ಕೆ ಇರುವೆಗಳ ಪಾದ ನಲುಗ್ಯಾದೊ

ಇಲ್ಲಿ, ಗುಬ್ಬಿ ಮರಿಗಳು ಸಹ ಕುಡಿಯಲು ನೀರಿಲ್ಲದೇ ಬರಿದಾದ ಬಾವಿಗಳು ಈ ಜನರ ಬರಿದಾದ ಬದುಕನ್ನು ಸಂಕೇತಿಸುವುದರ ಮೂಲಕ ಅವರ ಮೈಯಲ್ಲಿನ ಕಸುವನ್ನು ಸಹ ಕಸಿದುಕೊಂಡಿರುವುದು ಬಿಸಿಲಿನ ವಿಕಾರತೆ ಅದೆಷ್ಟು ಘೋರವಾಗಿದೆ ಎಂಬುದನ್ನು ಅರಿವಿಗೆ ತರುತ್ತದೆ.

ಹಾಗೆ ನೋಡಿದರೆ, ಬಯಲು ಸೀಮೆಯ ಜನರ ಬದುಕಿನಲ್ಲಿ ಬಿಸಿಲು ಕೇವಲ ಬಿಸಿಲಾಗಿ ಉಳಿದಿರದೇ ಅವರ ಅನ್ನವನ್ನು ಕಸಿದುಕೊಳ್ಳುವುದಕ್ಕೆ ಮತ್ತು ಹಂಚಿ ತಿನ್ನಬೇಕೆನ್ನುವ ಮನಸ್ಸಿನೊಳಗೆ ಸ್ವಾರ್ಥ ಭಾವನೆಯನ್ನು ತುಂಬುವುದಕ್ಕೆ ಕಾರಣವಾಗಿದೆ ಎಂದು ಕವಿ ಮರಗುತ್ತಾನೆ. ಅಂತೆಯೇ, ಬಯಲು ಸೀಮೆಯ ಜನರಿಗೆ ಕಂಟಕವಾಗಿ ಪರಿಣಮಿಸಿರುವ ಬಿಸಿಲಿಗೆ ಧಿಕ್ಕಾರ ಕೂಗುವ ನಿಟ್ಟಿನಲ್ಲಿರುವ ಈ ಗಜಲ್ ನ ತುಂಬೆಲ್ಲ ಈ ಭಾಗದ ಜನರ ನಿಟ್ಟುಸಿರೇ ತುಂಬಿದೆ ಎಂದಿನಿಸುತ್ತದೆ.

ಕವಿ ಗಿರಿಯಪ್ಪ ಅವರು, ವಿರಹದುರಿಯಲಿ ಬೇಯುತ್ತಿರುವ ಪ್ರೇಮಿಯೊಬ್ಬನ ಆಂತರ್ಯದಲ್ಲಿನ ತಲ್ಲಣಗಳನ್ನು ಅಷ್ಟೇ ಆರ್ದ್ರವಾಗಿ ಕಟ್ಟಿಕೊಡುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಇಲ್ಲಿ ‘ಕಂಬನಿಯ ಪಾತ್ರೆ’ ಎಂಬ ಗಜಲ್ ಇದೆ. ‘ಗಜಲ್’ ಎಂದರೆ ನಲ್ಲೆಯೊಡನೆ ಮಾತುಕತೆ ಎಂಬ ಅರ್ಥವಿರುವಾಗ ತನ್ನನ್ನು ಪ್ರೀತಿಸುವ ಜೀವಕ್ಕೆ ಒಪ್ಪಿಸಿಕೊಳ್ಳುವಂಥ ಕ್ರಿಯೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರೇಮ ಮತ್ತು ವಿಷಾದಗಳೆರಡೂ ಗಜಲ್ ನ ಜೀವದ್ರವ್ಯಗಳಾಗುತ್ತವೆ ಎಂಬುದನ್ನು ಈ ಗಜಲ್ ಸಾಕ್ಷೀಕರಿಸುತ್ತದೆ! ಈ ಸಾಲುಗಳನ್ನು ಗಮನಿಸಿ:

                    ಅವಳು ಪ್ರತಿ ಹೆಜ್ಜೆಯ ತಿರುವಿನಲ್ಲಿ ಕಣ್ಣೀರು ಸುರಿಸಿದಳು

                    ನನ್ನ ಕಣ್ಣ ರೆಪ್ಪೆಯ ತೇವ ಮಧುಶಾಲೆಯ ಬಣ್ಣವಾಗಿ ತೇಲುತ್ತಿತ್ತು

  ತನ್ನ ಗೆಳತಿಯ ನೆನೆದು ಕಣ್ಣೀರಾಗುವ ಪ್ರೇಮಿಯೊಬ್ಬ ತಾನು ಅನುಭವಿಸುತ್ತಿರುವ ದುಃಖದ ನೆರಳು ಮಧುಶಾಲೆಗೆ ನಶೆ ಏರಿಸುವುದು ಸಹಜವೆನಿಸುತ್ತದೆ. ಮಧುಶಾಲೆಯೆಂಬುದು ಪ್ರೇಮಿಗೆ ವಿರಹದಿಂದ ಬಿಡುಗಡೆಯಾಗುವ ದಾರಿಯನ್ನು ಕಾಣಿಸುತ್ತದೆ. ಅವಳು ಅಗಲಿಕೆಯ ದುಃಖದಲ್ಲಿ ಕಣ್ಣೀರು ಸುರಿಸಿದರೆ, ಈತನ ಕಣ್ಣರೆಪ್ಪೆಯ ತೇವ ಮಧುಶಾಲೆಯ ಬಣ್ಣವಾಗಿ ತೇಲುತ್ತದೆ ಎಂಬುದು ಸಹಜವೆನಿಸುತ್ತದೆ.

  ಈ ಸಂಕಲನದಲ್ಲಿರುವ ‘ಹಾರೋ ಹಕ್ಕಿಯ ಹೆಜ್ಜೆ ಹುಡ್ಕೋತ’ ಎಂಬ ಗಜಲ್ ತಾನು ಧ್ವನಿಸುವ ಅನೂಹ್ಯವಾದ ಅರ್ಥದಿಂದಾಗಿ ಅತಿ ಮುಖ್ಯ ಎನಿಸುತ್ತದೆ. ನಮಗೆ ಆಧುನಿಕ ಬದುಕು ತಂದುಕೊಡದ ಸುಖವನ್ನು ಸಾಂಪ್ರದಾಯಿಕ ಬದುಕು ತಂದುಕೊಡುತ್ತದೆ ಎಂಬ ಸಂದೇಶವನ್ನು ಈ ಗಜಲ್ ದಾಟಿಸುತ್ತದೆ. ಪ್ರಕೃತಿಯೊಳಗೆ ಸಂಭವಿಸುವ ಸಹಜ ಕ್ರಿಯೆಗಳನ್ನು ಮನುಷ್ಯ, ತನ್ನ ಸ್ವಾರ್ಥ ಕಾರಣವಾಗಿ ಹೇಗೆಲ್ಲ ಹಾಳುಗೆಡುವುತ್ತಾನೆ ಎಂಬ ವಿಚಾರವನ್ನೂ ಸಹ ಆರ್ದ್ರವಾಗಿ ಅನಾವರಣಗೊಳಿಸುತ್ತದೆ! ತನ್ನ ಪಾಡಿಗೆ ತಾನು ಸ್ವಚ್ಛಂದವಾಗಿ ಆಗಸದಲ್ಲಿ ಹಾರಿಕೊಂಡಿರುವ ಹಕ್ಕಿಯಾಗಲಿ, ಕೂಳಿಗಾಗಿ ಸಾಲಾಗಿ ನಿಂತ ಇರುವೆಯಾಗಲಿ, ರೈತನ ಮಿತ್ರನಂತಿರುವ ಎರೆಹುಳುವಿನ ಪ್ರಾಮಾಣಿಕ ಕರ್ತವ್ಯವಾಗಲಿ- ಹೀಗೆ ಸೃಷ್ಟಿಯ ಮನುಷ್ಯೇತರ ಜೀವಿಗಳ ಅನೇಕ ಪ್ರಕ್ರಿಯೆಗಳು ತನ್ನ ಭೋಗದ ಬದುಕಿಗಾಗಿ ಆಧುನಿಕ ತಂತ್ರಜ್ಞಾನವನ್ನು ಮುಂಚೂಣಿಗೆ ತರಬೇಕೆನ್ನುವ ಮನುಷ್ಯನ ದುರಾಶೆಯ ಕಾರಣವಾಗಿ ನಶಿಸಿ ಹೋಗುತ್ತಿರುವುದು ವಿಪರ್ಯಾಸದ ಸಂಗತಿ ಎನ್ನಬೇಕು:

   ಬೆರಗು ಉಣಿಸೊ ನವಿಲ ಹೆಜ್ಜಿಯೊಳಗ ಕೆಂಗಣ್ಣು ಕುಕ್ಕುದು ಬ್ಯಾಡ

   ಮನದ ಬಟ್ಟಲು ತುಂಬಿದ ಗಿರಿ ಮಣ್ಣ ವಾಸನೆಯೊಳಗ ಮರುಕ           ತುಂಬೂದು ಬ್ಯಾಡ

  ಪ್ರಕೃತಿ ನಮಗೆ ಏನೆಲ್ಲವನ್ನು ಕೊಟ್ಟಿರುವಾಗ ಅದನ್ನು ಸಹಜವಾಗಿಯೇ ಸ್ವೀಕರಿಸುವ, ಅನುಭವಿಸುವುದರಲ್ಲಿಯೇ ಹೆಚ್ಚಿನ ಸುಖವಿದೆ. ನಾವು ಬೆರಗು ಹುಟ್ಟಿಸುವ ನವಿಲಿನ ನೃತ್ಯವನ್ನು ದೂರದಿಂದಲೇ ಕಣ್ತುಂಬಿಕೊಂಡು ಸಂಭ್ರಮಿಸಬೇಕೆ ವಿನಃ ಅದರ ಕತ್ತು ಕತ್ತರಿಸುವ ದುಷ್ಟತನವನ್ನು ಮೆರೆಯಬಾರದು ಎಂದು ಕವಿಯಾಗಿ ಗಿರಿಯಪ್ಪ ಅವರು ಆಶಿಸುತ್ತಾರೆ.

   ಇನ್ನು, ಗಿರಿಯಪ್ಪ ಅವರು ಮನುಕುಲಕ್ಕೆ ನಗರೀಕರಣ ಪ್ರಕ್ರಿಯೆಯು ತಂದೊಡ್ಡಿದ ಅಪಾಯದ ಕುರಿತಾಗಿ ‘ಕತ್ತಲಿನಾಚೆ’ ಎಂಬ ಗಜಲ್ ನಲ್ಲಿ ಆರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಗರೀಕರಣ ಪ್ರಕ್ರಿಯೆಯು ಮನುಷ್ಯ ಸಂಬಂಧಕ್ಕೆ ಇರಬಹುದಾದ ಮಹತ್ವವನ್ನು ಅಳಿಸಿ ಹಾಕಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ. ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಪರಸ್ಪರ ಪ್ರೀತಿ, ಸೌಹಾರ್ದತೆ ಇರಬೇಕು. ಪ್ರೀತಿಯನ್ನು ಗೆಲ್ಲಲಾಗದ ಧರ್ಮ ಇದ್ದರೇನು ಫಲ?- ಎಂಬ ಪ್ರಶ್ನೆಯನ್ನು ಎತ್ತುವುದರ ಮೂಲಕ ಓದುಗನನ್ನು ಚಿಂತನೆಗೀಡು ಮಾಡುತ್ತದೆ. ಅಷ್ಟಕ್ಕೂ ಕವಿ ಗಿರಿಯಪ್ಪ ಅವರು ಮಾನವೀಯತೆಯನ್ನು ನಗರಗಳಲ್ಲಿ ಹುಡುಕುವುದು ವ್ಯರ್ಥ ಪ್ರಯತ್ನ ಎನ್ನುತ್ತಾರೆ. ನಗರಗಳು ಇಂದು ಮನುಷ್ಯತ್ವವಿಲ್ಲದ ಮನುಷ್ಯರನ್ನೇ ಹೊಂದಿದ್ದು ಕಿಕ್ಕಿರಿದು ಗೋರಿಗಳು ತುಂಬಿದ ಸ್ಮಶಾನಗಳಂತೆ ಗೋಚರಿಸುತ್ತವೆ. ಅದಕ್ಕೇ, ಕವಿ ಹೇಳುತ್ತಾನೆ:

                      ಕೂಡಿ ಬಾಳುವ ಜಗದಲಿ ಗಿರಿ ಸ್ವಾರ್ಥದ ನೆಲೆಗಳು ಆವರಿಸಿವೆ

                      ಬೇಧದ ಬೇಲಿಗಳ ಒಡಲಿಗೆ ಸೌಹಾರ್ದ ಮನಸ್ಸು    ಕಟ್ಟಬೇಕಿದೆ

  ಮನಸ್ಸು ಮನಸ್ಸುಗಳನ್ನು ಬೆಸೆಯುವುದಕ್ಕಾಗಿ ರಾಗ ದ್ವೇಷಗಳನ್ನು ಇಲ್ಲವಾಗಿಸಿ, ಹೃದಯಗಳನ್ನು ಬೆಸೆಯುವ ಕಣ್ಣುಗಳನ್ನು ಮತ್ತು ಜೀವಕಾರುಣ್ಯವನ್ನು ಗೆಲಿಸುವ ದನಿಯನ್ನು ಹುಡುಕಿ ಸಹೃದಯತೆಗೆ ಜೀವ ತುಂಬಬೇಕಾಗಿದೆ ಎನ್ನುತ್ತಾರೆ.

  ಹಾಗೆಯೇ, ಇದಕ್ಕಿಂತ ಭಿನ್ನವಾದ ’ಒಲೆ ಊದೋ ಕೈಗಳು’ ಗಜಲ್ ನಲ್ಲಿ ತಾಯಿಯ ಕುರಿತಾದ ಚಿತ್ರಣವನ್ನು ಅಷ್ಟೇ ಆಪ್ತವಾಗಿ ಗಿರಿಯಪ್ಪ ಅವರು ಕಟ್ಟಿಕೊಡುತ್ತಾರೆ. ತಾಯಿ ಎಂಬ ಜೀವ ತನ್ನ ಸಂಸಾರದ ರಥವನ್ನು ಎಳೆಯಲು ನಡೆಸುವ ಹೋರಾಟವೆಲ್ಲ ಈ ಗಜಲ್ ನಲ್ಲಿ ಹೆಪ್ಪುಗಟ್ಟಿದೆ. ತಾನು ಒಲೆ ಊದುತ್ತಲೇ ತನ್ನ ಗಂಡ,ಮನೆ, ಮಕ್ಕಳ ವಿಚಾರದಲ್ಲಿ ಸುಂದರವಾದ ಕನಸು ಕಾಣಲು ಸಾಧ್ಯವಾಗುವುದು ತಾಯಿಗೆ ಮಾತ್ರ ಎನ್ನಬೇಕು:

                           ಮಸಾರಿ ಹೊಲದ ಬದುವಿಗೆ ಗಟ್ಟಿ ಬೇರಿನ ಹೂವಾಗಿ

                        ಮಕರಂದದ ಮಣ್ಣೊಳಗೆ ಕನಸುಗಳು ಮಹಲು ಕಟ್ಟುತ್ತಿದ್ದವು

  ತಾಯಿ ಎನ್ನುವ ಜೀವ ಕಷ್ಟಗಳನ್ನೆಲ್ಲ ಒಳಗೊಳಗೆ ನುಂಗಿ ತನ್ನ ಕುಟುಂಬಕ್ಕಾಗಿ ಚೆಂದಿರನ ಬೆಳದಿಂಗಳನ್ನು ಕರೆ ತರಲು ಪ್ರಯತ್ನಿಸುತ್ತಾಳೆ. ಹೊಲದ ಬದುವಿಗೆ ಹೂವಿನ ಗಿಡವಾಗಿ, ಮಣ್ಣೊಳಗೆ ಕನಸುಗಳನ್ನು ಬಿತ್ತಿ ಬೆಳೆಯುತ್ತಾಳೆ. ಬೆವರು ಬಸಿದು, ದುಡಿದು ಹೈರಾಣಾದ ಜೀವ ತನ್ನವರಿಗಾಗಿ ಎಲ್ಲವನ್ನೂ ಸಾಧ್ಯವಾಗಿಸಿ, ಎಲ್ಲರ ಯಶಸ್ಸಿಗೂ ತಾನೇ ಕಾರಣಳಾಗಿ ಕೊನೆಗೂ ತೆರೆಯ ಮರೆಯಲ್ಲಿಯೇ ಉಳಿದು ಬಿಡುತ್ತಾಳೆ! ಹೀಗೆ, ಎಲ್ಲರ ಬದುಕಿನಲ್ಲೂ ತಾಯಿಯು ಬಹು ಮುಖ್ಯ ಪಾತ್ರ ವಹಿಸುತ್ತಾಳೆ.

  ಈ ಸೃಷ್ಟಿಯ ಮೇಲೆ ಬುದ್ಧಿವಂತ ಪ್ರಾಣಿ ಎಂದೆನಿಸಿಕೊಂಡಿರುವ ಮನುಷ್ಯನ ಸ್ವಾರ್ಥ ಗುಣಕ್ಕೆ ವಿರುದ್ಧವಾಗಿ ಮನುಷ್ಯೇತರ ಜೀವ ಜಂತುಗಳ ಗುಣ ಮತ್ತು ಸ್ವಭಾವಗಳಿರುತ್ತವೆ ಎಂಬುದನ್ನು ’ತೆನೆಗೆ ಕುಕ್ಕುವ ಹಕ್ಕಿಗಳು’ ಎಂಬ ಗಜಲ್ ವಿವರಿಸುತ್ತದೆ:

                           ಬಿಸಿಲ ಹೀರುವ ಎರೆಹುಳುಗಳು ಮಣ್ಣಿನ ಸಂತರಾಗ್ಯಾವು

                          ರಕ್ತ ಮುಕ್ಕುವ ನಂಜಿನ ನಾಲಿಗ್ಯಾಗ ಒಣಬೇರಿನ ಕಿಚ್ಚಾಗ್ಯಾವ

  ರೈತನ ಸ್ನೇಹಿ ಎನಿಸಿಕೊಂಡಿರುವ ಎರೆಹುಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಕಾರಣವಾದರೆ, ಮನುಷ್ಯ ಮಾತ್ರ ನಂಜಿನ ನಾಲಗೆಯ ಮೂಲಕವೇ ದ್ವೇಷ ಅಸೂಯೆಗಳ ಹುಟ್ಟಿಗೆ ಕಾರಣನಾಗುತ್ತಾನೆ. ಇನ್ನು, ಇರುವೆಗಳು ಒಟ್ಟಾಗಿ ಆಹಾರ ಅರಸುವ ಕ್ರಿಯೆಯು ಒಗ್ಗಟ್ಟಿಗೆ ಸಾಕ್ಷಿಯಾದರೆ, ಎಲ್ಲವೂ ತನ್ನೊಬ್ಬನದೇ ಎಂದುಕೊಂಡು ಅಹಂ ಮಿನ ಕೋಟೆಯೊಳಗೆ ಬಂಧಿಯಾಗಿ ಏಕಾಂಗಿಯಾಗಬಯಸುವುದು ಮನುಷ್ಯನ ಸ್ವಾರ್ಥ ಗುಣಕ್ಕೆ ಸಾಕ್ಷಿಯಾಗಿದೆ ಎನ್ನಬೇಕು. ಹೀಗೆ, ಇಡಿಯಾಗಿ ಗಜಲ್ ಮನುಷ್ಯ ಮತ್ತು ಮನುಷ್ಯೇತರ ಜೀವಿಗಳ ನಡುವಿನ ಮನೋ ವ್ಯತ್ಯಾಸವನ್ನು ಗುರುತಿಸುತ್ತ ಹೋಗುತ್ತದೆ.

  ಹೀಗೆ, ಈ ಸಂಕಲನದಲ್ಲಿರುವ ಗಜಲ್ ಗಳು ಅದೆಷ್ಟೋ ಸಂಕೀರ್ಣವಾದ ವಿಚಾರಗಳನ್ನು ನೇರವಾಗಿ ಓದುಗನ ಎದೆಯ ಆಳಕ್ಕಿಳಿಸಿ ಕ್ಷಣಕಾಲ ಮಾನಸಿಕವಾಗಿ ಅಸ್ವಸ್ಥನಾಗಿಸಿಬಿಡುತ್ತವೆ. ಇವು ಮೇಲ್ನೋಟಕ್ಕೆ ಸರಳವೆನಿಸುತ್ತವಾದರೂ ಅದರ ಆಳದಲ್ಲಿ ನಮ್ಮ ಊಹೆಗೂ ನಿಲುಕದ ಹಲವಾರು ಸಂಗತಿಗಳೊಂದಿಗೆ ಮುಖಾಮುಖಿಯಾಗುತ್ತವೆ. ಹಾಗೆ ನೋಡಿದರೆ ಓದಗನು ಸಹಜವಾಗಿಯೇ ಅವುಗಳನ್ನು(ಗಜಲ್) ಒಳಗೊಳ್ಳುತ್ತ ಹೋಗುತ್ತಿರುವೆನೆಂದೆನಿಸುತ್ತದೆಯಾದರೂ ಅದೆಲ್ಲೋ ಅಮೂರ್ತದಲ್ಲಿ ವರ್ತಮಾನ ಸಂದರ್ಭದ ಈ ಲೋಕದ ವಿದ್ಯಮಾನಗಳಿಗೆ ಪ್ರತಿಕ್ರಿಯಾತ್ಮಕವಾಗಿ ಮುಖಾಮುಖಿಯಾಗುತ್ತಲೇ ಇರಬಹುದಾದ ಹೊಸ ಹೊಸ ಸಾಧ್ಯತೆಗಳನ್ನು ಗುರುತಿಸುತ್ತವೆ. ಇಲ್ಲಿನ ಗಜಲ್ ಗಳನ್ನು ಗೆಳೆಯ ಗಿರಿಯಪ್ಪ ಎಂಬ ಗಜಲ್ ಕವಿಯನ್ನು ಮರೆತು ಬರೀ ಗಜಲ್ ಗಳಷ್ಟೇ ಮುಖ್ಯ ಎಂಬ ಮನೋಸ್ಥಿಯಲ್ಲಿ ಆಸ್ವಾದಿಸುವುದು ಸಹ ಅಷ್ಟೇ ಮುಖ್ಯ ಎನಿಸುತ್ತದೆ. ಆಗ ಸಹಜವಾಗಿಯೇ ಈ ಸಂಕಲನದ ಗಜಲ್ ಗಳಲ್ಲಿನ ಓರೆಕೋರೆಗಳೂ ಸಹ ಗೋಚರಿಸುತ್ತವೆ.

  ಅಷ್ಟಕ್ಕೂ, ಈ ಗಜಲ್ ಸಂಕಲನಕ್ಕೆ ’ಅಲೆವ ನದಿ’ ಎಂಬ ಶೀರ್ಷಿಕೆ ಸರಿಯಾಗಿಯೇ ಒಪ್ಪುತ್ತದೆ. ಹೇಗೆ ಹರಿವ ನದಿಯು ತನ್ನ ಮೈಯಲ್ಲ ಕಾಲು ಮೂಡಿಸಿಕೊಂಡು, ದಾರಿ ಕಂಡಲ್ಲೆಲ್ಲ ಹರಿಯುತ್ತಲೇ ಇರುತ್ತದೆಯೋ ಹಾಗೆಯೇ ಕವಿಯಾಗಿ ಗಿರಿಯಪ್ಪ ತಮ್ಮ ಅಂತರಂಗಕ್ಕೆ ಕಾಲು ಮೂಡಿಸಿಕೊಂಡು ಸ್ವಚ್ಛಂದವಾಗಿ ಲೋಕದ ವಿದ್ಯಮಾನಗಳಿಗೆ ಮುಖಾಮುಖಿಯಾಗಲೆಂದು ನಿರಂತರವಾಗಿ ಅಲೆದ ಫಲವೇ ಈ ಸಂಕಲನದ ಗಜಲ್ ಗಳು ಎನ್ನಬೇಕು. ಈ ಅಲೆದಾಟದಲ್ಲಿ ಲೌಕಿಕ ಬದುಕಿನ ಅನೇಕ ವಿಚಾರಗಳು ಕವಿಗೆ ಎದುರಾಗಿವೆ. ಆ ಎದುರುಗೊಳ್ಳುವಿಕೆಯ ಭರದಲ್ಲಿ ಕೆಲವೊಮ್ಮೆ ಪುನರಾವರ್ತನೆಯಾದದ್ದೂ ಇದೆ. ಇದು ಮೊದಲ ಪ್ರಯತ್ನವಾಗಿರುವುದರಿಂದ ಸಹಜವೂ ಹೌದು. ಮುಂದಿನ ದಿನಮಾನಗಳಲ್ಲಿ ಗಿರಿಯಪ್ಪ ಅವರು ಇಂಥ ಓರೆಕೋರೆಗಳನ್ನೆಲ್ಲ ಮೀರಲಿ ಎಂದು ಆಶಿಸುತ್ತೇನೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಲ್ಲೇಶ್ ಕುಂಬಾರ್