ಅಷ್ಟಷ್ಟೇ ಇಕ್ಕಟ್ಟಿನಲ್ಲಿ
ಮೂರೂ ದಿಕ್ಕಿನಿಂದ ಕೈಮಾಡಿ ಕರೆಯುವ ಕನ್ನಡಿಗಳ ಆತ್ಮಕ್ಕೆ
ಮಾಟವಿಲ್ಲ,
ಆಸೆಗಣ್ಣಿನಿಂದ ಬಯಸಿ ತೊಟ್ಟ
ಸ್ಲಿವ್ ಲೆಸ್ ಟಾಪಿನ ಟುಲಿಪ್ ಮೊಗ್ಗು,
ದುಬಾರಿ ಪ್ರಿನ್ಸ್ ಕಟ್ ಬೌಜಿನ ಜರಿ ಬಾರ್ಡರು,
ಟ್ರಯಲ್ ರೂಮಿನ ಹ್ಯಾಂಗರುಗಳಲ್ಲಿ
ಹಾಗೆಯೇ ನೇತುಬಿದ್ದಿವೆ,
ನೀಳ ಬೆರಳಿನ ಸೇಲ್ಸ್ ಗರ್ಲ್ ಮುಟ್ಟಿ ಮುಟ್ಟಿ ಮಡಿಕೆ ಮಾಡಿ
ನಾಳೆಯ ಮನಸುಗಳ ಕದ ತಟ್ಟುವ ತನಕ.
ಕೂಲಿಂಗ್ ಗ್ಲಾಸಿನ ಕಾರ್ಪೋರೇಟ್ ಹುಡುಗಿಯ
ಬೆಳ್ಳನೆಯ ಮೈಯ್ಯ ಮೇಲೆ
ಬಿಸಿಲು ಮುತ್ತಿರಿಸಿದ ದಿನ
ಟುಲಿಪ್ ಮೊಗ್ಗು ಬಿರಿಯುವ ತನಕ,
ಮನೆಯ ಕನ್ನಡಿಯಲ್ಲಿ
ಎಂದೂ ಅನಾವರಣಗೊಳ್ಳದ
ಸುಂದರತೆ,
ಕಣ್ಣು ಮೂಗು ಗಲ್ಲದ ಮೇಲೊಂದು ನೇವರಿಕೆ
ಸ್ಪರ್ಶದಲ್ಲಿ ಕನ್ನಡಿಯ ಪರಕೀಯತೆ,
ಮೊಣಕಾಲು ಬಿಟ್ಟು ಮೇಲೇರುವ ಸ್ಕರ್ಟುಗಳು
ವ್ಯಾಕ್ಸ್ ಮಾಡದ ಮೀನಖಂಡ ತೊಡೆಗಳು
ಯಾವ ಮಾಡೆಲ್ಲಿಗೂ ಕಡಿಮೆಯಿಲ್ಲ ನಾವು...
ಟ್ರಯಲ್ ರೂಮಿನ ರಾರಾಜಿತ ಸತ್ಯ
ಸೀಮೆಯೊಳಗೇ,
ಮನಸು ಕನ್ನಡಿ ಟುಲಿಪ್ ಮೊಗ್ಗು ಯಾವುದೂ
ನಮ್ಮ ಬೆನ್ನ ಹಿಂದೆ ಬರಲಾರವು
ನಾವೆಲ್ಲ ಟ್ರಯಲ್ ರೂಮಿನ ಅಪ್ಸರೆಯರು
ವಯಸ್ಸು ಹೋದ ಹರೆಯವ
ಬಡಿದೆಬ್ಬಿಸುವ
ಸ್ಪೀಟ್ ಬಾಯ್
"ಲುಕಿಂಗ್ ಸ್ಮಾರ್ಟ್,..."
ಎನ್ನುತ್ತ ಗಾಳಿಯ ಹೆಗಲ ಮೇಲೆ ಕೈಹಾಕಿ
ಚೂರು ಚೂರು ಸುಗಂಧವ ಬಿತ್ತುತ್ತಾ ನಡೆದಿದ್ದಾನೆ
ಕಾರ್ಪೋರೇಟ್ ಕಾಡು ಹೊಕ್ಕ
ಅಜ್ಞಾತ ಜಿಂಕೆಮರಿಗಳು ನಾವು
- ಭುವನ ಹಿರೇಮಠ
ಭುವನಾ ಹಿರೇಮಠ
ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ.
More About Author