ನಮ್ಮ ತೋಟದ ಹೂಗಳ ರುಂಡ ಕತ್ತರಿಸಿ
ಪಕಳೆಗಳ ಹರಿದು ಚೂರು ಚೂರು ಮಾಡಿ
ಒರಳಲ್ಲಿ ಹಾಕಿ ಒಣಕೆಯಿಂದ ಸಣ್ಣಗೆ ಕುಟ್ಟಿ
ರಸವ ತೆಗೆದು ಅಮೃತವ ಮಾಡಿದರು
ಅದೋ ಕಾಲ ಮುಂದೂಡುವ
ಮುಪ್ಪು ಮರೆ ಮಾಚುವ
ಚಿರ ಯೌವ್ವನ ತುಂಬುವ
ಮೈ ಮನಗಳ ಗಾಳಿಯಲ್ಲಿ ತೇಲಿಸುವ
ಸದಾ ಸರ್ವಾಂಗೀಣ ಸುಂದರಗೊಳಿಸುವ
ದಿವ್ಯಾಮೃತ
ಮೊಲವನ್ನು ಸಿಂಹವಾಗಿಸುವ
ಇಲಿಯನ್ನು ಹುಲಿಯಾಗಿಸುವ
ಇರುವೆಯನ್ನು ಆನೆಯಾಗಿಸುವ
ನರಿಯನ್ನು ತೋಳವಾಗಿಸುವ
ಮುಂಗೂಸಿಯನ್ನು ಹಾವಾಗಿಸುವ
ಸಂಜೀವಿನಿ
ಬೆಳ್ಳಂಬೆಳಿಗ್ಗೆ ಕೊಳ್ಳಿ ದೆವ್ವಗಳು
ಬಂಗಾರದ ಬಂಡಿಯಲ್ಲಿ ಬಡಿವಾರದಿಂದ
ಬಣ್ಣ ಬಣ್ಣದ ಕುಲಾಯಿ ತೊಟ್ಟ ವಿದೂಷಕರು
ಬಟ್ಟೆಯಿಲ್ಲದ ಬಿಳಿ ತೊಗಲಿನ ತಿಂತಿಣಿಯರು
ಹಗಲೇ ಬೆಳದಿಂಗಳು ಚೆಲ್ಲಿದಂತೆ, ನಕ್ಷತ್ರ ಮೂಡಿದಂತೆ
ಮೆರವಣಿಗೆ ಹೊರಟಿವೆ
ಹೂ ಪಕಳೆಗಳ ಅಮೃತವ ಸವಿಯುಣಿಸಲು
ಒಂದೇ ಒಂದು ಹನಿ ಕುಡಿದರು ಸಾಕು
ನರ ನಾಡಿಗಳು ಹುರಿಗೊಂಡು
ಸಿಡಿಲ ಜಂಗಮತ್ವ ಎದೆಯೇರಿ
ಕಾಮ ರಸಾಯನದ ಲಾವ ರಸ ಉಕ್ಕಿ
ಜ್ವಾಲಮುಖಿ ಸ್ಪೋಟಗೊಂಡು ಅನುಕ್ಷಣವೂ
ಉದ್ದೀಪನ ಉನ್ಮತ್ತ ಉತ್ತುಂಗ ಸರೋವರ
ಬನ್ನಿ ಬನ್ನಿ ಈಜಾಡಿ ತೇಲಾಡಿ
ಹಗಲು ರಾತ್ರಿಯ ಹಂಗಿಲ್ಲದ
ಮೈಥುನವೋ ಮೈಥುನ.......
ನವಮಾಸ ಬೇಕಿಲ್ಲ, ಹೆರಿಗೆ ನೋವಿಲ್ಲ
ಹುಟ್ಟಿದ ಕ್ಷಣವೇ
ಮುಗಿಲೆತ್ತರಕ್ಕೆ ಎದ್ದು ನಿಲ್ಲುತ್ತಾರೆ
ನವ ನಂದನರು !
- ರಾಜಶೇಖರ ಹಳೆಮನೆ
ರಾಜಶೇಖರ ಹಳೆಮನೆ
ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ತನಕ ಪ್ರಕಟಿಸಿದ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 2019ನೇ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿದೆ.
More About Author