Poem

ಸಂತೆಯ ಸರಕು

ಇಲ್ಲಿ ಪ್ರೀತಿ ಹಂಚಲಾಗುತ್ತದೆ
ಎಂಬ ಅಂಗಡಿಯ ತಲೆಬರಹದ
ಕೆಳಗೆ ;
ಸ್ಟಾರು ಹಾಕಿ ಸಣ್ಣ ಅಕ್ಷರಗಳ
'ಷರತ್ತುಗಳು ಅನ್ವಯ' ಎಂಬ ಪದ
ನನ್ನ ಕಣ್ಣಿಗೆ ಬೀಳಲಿಲ್ಲ - ಕ್ಷಮಿಸಿ.

ಬರಿಗೈಯಲ್ಲೇ ಒಳಗೆ ಕಾಲಿಟ್ವವನಿಗೆ
ಸಿಕ್ಕಿದ್ದು ಭರ್ಜರಿ ಸ್ವಾಗತ ;
ಬರಿಗಾಲಿಗೂ ಒಂದು ಘನತೆ ದಕ್ಕಿದ್ದು
ಅದೇ ಮೊದಲು.

ಅಂಗಡಿಯ ತುಂಬ ಮಾತೇ ಮಾಣಿಕ್ಯ
ಪದ ಪದ ಜೋಡಿಸಿದ ಮುತ್ತಿನ ಹಾರ ;
ಮನದ ಮೂಳೆಗೆ ನೇತು ಬಿದ್ದ ಮೌನ ಎದೆ ಕಲಕುವ ಕೊರಳ ಹಾಡು ಕರಳು ಬಳ್ಳಿ
ಜೋಡಿಸುವ ಜನ್ಮಾಂತರದ ನಂಟು.

ಸಂಜೆಯಾಗುತ್ತದೆ
ಅಂಗಡಿಗಳೂ ಕದವಿಕ್ಕುತ್ತವೆ;
ಕಣ್ಣ ಹಣತೆಯ ದೀಪವಾರುತ್ತವೆ
ಪ್ರೀತಿಯೂ ಚಿಲ್ಲರೆ ಚೌಕಾಸಿಗೊಳಾಗುವ
ಸಂತೆಯ ಸರಕು ಎಂದು ಎಲ್ಲ ಮುಗಿದ ಮೆಲೆ
ಅರಿವಾಗುವ ಕ್ಷಣ ಅದು.


ಆಡಿದ ಮಾತುಗಳು
ಹಾಡಿದ ಪದಗಳು ಕರುಳು ಅಂಟಿಸುವ
ನಂಟು ;
ಉರಿದು ಆರಿದ ದೀಪಗಳ ಸಿಡಿಲ ಮೌನ.

ಇಷ್ಟಗಲ ನಕ್ಕಿದ್ದೂ ಸುಳ್ಳೇ !

ಪುಕ್ಕಟೆಯಾಗಿ ಯಾವುದೂ ಸಿಗುವುದಿಲ್ಲ
ಇಲ್ಲಿ ;
ಪ್ರತಿ ಪ್ರೀತಿಯೂ ಷರತ್ತಿಗೊಳಪಟ್ಟು
ಆತ್ಮಾಹುತಿಗಾಗಿ ಕಾಯುತಿರುವ ಶಿಲುಬೆ !

**
ಡಾ.ಲಕ್ಷಣ ವಿ ಎ

ಲಕ್ಷ್ಮಣ ವಿ.ಎ

ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಓದು, ಬರಹವನ್ನು ಹವ್ಯಾಸವಾಗಿಸಿಕೊಂಡಿರುವ ಲಕ್ಷ್ಮಣ್ ಅವರು ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಪ್ಪನ ಅಂಗಿ’ ಅವರ ಇತ್ತಿಚಿನ ಕೃತಿ.

More About Author