ಮಸಿಗೆ ಬುದ್ದಿಯ ಹೇಳಿ
ಆಕಾಶ ನೋಡಿದೆ
ಕಂಡದ್ದು ಬರಿಯ ನಕ್ಷತ್ರವಾದವರೇ!
ಕೆಲವರು ಜನ್ಮಜಾತರು
ಇನ್ನು ಕೆಲವರು ಚಪ್ಪಲಿ ತೊಟ್ಟು ಮೇಲೇರಿದವರು
ಚಪ್ಪಲಿಯೋ.....?
ಹಲವು ಬಣ್ಣಗಳದ್ದು,
ಬಗೆ ಬಗೆಯ ಬ್ರ್ಯಾಂಡುಗಳದ್ದು
ಬೆಲ್ಟ್ ಇರುವುದು,
ಹಲ್ಲು ಕಿತ್ತಿದ್ದು,
ಹವಾಯಿ ಇತ್ಯಾದಿ
ಮಂದಿ ಹಾದಿ ಸವೆಸುವುದ ಬಿಟ್ಟು
ಬಾಡಿದುಕೊಳ್ಳಲು ಶುರುಮಾಡಿದಾಗಿನಿಂದ ಬೆಲೆ ಹೆಚ್ಚಾಗಿದೆ.
*
ಅಲ್ಲಲ್ಲಿ ಹಲ್ಲು ಕಿಸಿಯುವ ಪ್ಲಾಸ್ಟಿಕ್ ಚೂರುಗಳು
ತಲೆ ಚಿಟ್ಟು ಹಿಡಿಸುವ ಕೇಸರಿ ನಿತಂಬಿನಿಯರು,
ಒಂದಷ್ಟು ಗುಳಾಪದ ಬೆಳಕು
ಗುಡ್ಡೆ ಕೀಳುವ ಎಲ್ಇಡಿ ಕೊಳಕು,
ಉಸ್ಸಪ್ಪ....
*
ಕಣ್ಣು ಮಬ್ಬಾಯಿತು,ಗೋಣು ನೋಯಿತು
ತಲೆ ತಗ್ಗಿಸಿದೆ,ನೆಲ ನೋಡಿದೆ
ಅದೆಷ್ಟು ಆಳಕ್ಕೆ ಇಳಿದ ಬೇರು
ಮುಳ್ಳುಗಳ ನಡುವೆಯೂ ನಗುವ ಹೂವು
ಒಲೆಯ ಹೊಗೆಲಿ ಹಸಿವು ತಟ್ಟುವ ಅವ್ವ,
ಕೈತುತ್ತ ಉಣ್ಣದೆ ದೊರೆಮನೆಯ ಎಂಜಿಲಿಗೆ ಮುಳ್ಳ ಅಂಗಿ ತೊಟ್ಟ ಮಕ್ಕಳು,
ಮಂತ್ರದಿಂದ ಒಲಿದು ಹೋದ ಕಿವಿಗಳು,
ಲೇಖನಿ ನಕ್ಕು ಹೇಳಿತು ನಿನ್ನ ಶಾಯಿ ಹಿಂದಿನ ಕಥೆಯು ಇದೆ.
- ವಿಶಾಲ್ ಮ್ಯಾಸರ್
ವಿಶಾಲ್ ಮ್ಯಾಸರ್
ಕವಿ ವಿಶಾಲ್ ಮ್ಯಾಸರ್ ಮೂಲತಃ ಹೊಸಪೇಟೆಯವರು. ಕತೆ, ಕವನ ಬರೆಯುವುದು ಅವರ ಹವ್ಯಾಸವಾಗಿದೆ. ಹೊಸಪೇಟೆ ವಿಜಯನಗರ ಮಹಾ ವಿದ್ಯಾಲಯದಲ್ಲಿ ಬಿ.ಎಸ್.ಸಿ ವಿದ್ಯಾರ್ಥಿಯಾಗಿರುವ ಅವರು ಹೊಸಪೇಟೆಯ ಬಂಡಾಯ ಸಾಹಿತ್ಯ ಸಂಘಟನೆಯ ತಾಲೂಕು ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
More About Author