Poem

ನುಡಿಗಿಡಿದ ಮೌನ

ಆ ಅಕ್ಷರಕೆ ಕಾಲಿತ್ತಾ ಕೈಯಿತ್ತು
ಜಗವ ನೋಡುವ ಕಣ್ಣಿತ್ತು
ಅಂತರಂಗದ ಧ್ವನಿಯಿತ್ತು
ಬೆಳ್ಳಂಬೆಳಗಿನ ಆತ್ಮವಿತ್ತು.

ಅಕ್ಷರವು ಪದವಾಗಿ
ಪದವು ಪದಪುಂಜವಾಗಿ
ಪದದಪುಂಜ ವಾಕ್ಯವಾಗಿ
ವಾಕ್ಯವು ವಾಕ್ಯವೃಂದವಾಗಿ
ಖಂಡವಾಗಿ ಅಖಂಡವಾಗಿ
ನುಡಿಯಾಗಿ ಲಯಬದ್ಧ ನಡೆಯಾಗಿ
ಕಾವ್ಯಧಾರೆಯಾಗಿ
ಶಬ್ಧಸೂಕ್ಷ್ಮವಾಗಿ ಅಲಂಕರವಾಗಿ
ಅಮ್ಮನ ಕೊರಳಿನ ಮುತ್ತಿನ ಹಾರವಾಗಿ
ಅದೊ ಅದೋ ಬೆಳೆದು ನಲಿದು
ಧಳಧಳನೆ ಹೊಳೆ ಹೊಳೆವ ಕವಿ ವಾಣಿಯಾಗಿ

ಒಂದು ಕ್ಷಣ ಸ್ತಬ್ಧ
ನಿಶ್ಯಬ್ಧ ನೀರವ ಮೌನ
ಸೂಟುಬೂಟುಗಾಲಿನ ಸದ್ದು
ತರಿತರಿದು ಕತ್ತರಿಸಿ ಹೊಸಕಿದ
ಕರಕರ ಸದ್ದು ಪಡೆ ಕೇಕೆ

ಅನ್ಯದ ಗಾಳಿ ಇಡಿಗಿಡಿದು
ಶೈಲಿ ಔನ್ನತ್ಯಗಳ ಮಧ್ಯೆ ನಲುಗಿ
ಶೈಲಿಯೇ ಪದವಾಗಿ ನರಮಂಡಲದ
ಉನ್ನತಿಕೆ ವಾಕ್ಯವಾಗಿ
ತೊದಲು ಉಚ್ಛಾರಗಳು
ಅಲಂಕಾರವಾಗಿ ಮಾಧುರ್ಯಲಯವಾಗಿ
ಬರಿಯ ಶಬ್ಧಗಳೆ ನುಡಿಯಾಗಿ

ದೂರದರ್ಶನವೆ ಗಣಕಯಂತ್ರವಾಗಿ
ಕೀಲಿಮಣಿಯಲ್ಲಿ ಇಲಿ ಓಟ ಹೆಚ್ಚಾಗಿ
ಭಂಡಾರಗಳು ಖಾಲಿ ಖಾಲಿ

ತಾಳೆಗರಿಗಳು ಹೊತ್ತಗೆಗಳು
ಈಗ ಪ್ರದರ್ಶನದ ವಸ್ತುವಾಗಿ
ಕವಿ ಮನೆಗಳೆಲ್ಲ ಗಾನಮೇಳ
ವಿಲಾಸದ ರೆಸಾರ್ಟ್‌ಗಳಾಗಿ
ಭಾವ ಕಳಕೊಂಡ ಗೀತಗಳೆಲ್ಲ
ಅಗ್ಗದ ಧ್ವನಿ ಸಸುರುಳಿ ಸಿಡಿಗಳಾಗಿ
ನುಡಿ ಹಬ್ಬಗಳೆಲ್ಲ ಜಾತ್ರೆಯಾಗಿ
ಬಾಯಾಡಂಬರದ ರೂಪವಾಗಿ
ಕಟ್ಟಿ‌ದ ಸಂಘಗಳೆಲ್ಲ ಬರಿಯ
ನಾಟಕ ಮತಿಗೆಟ್ಟ ಆಳುವ ವ್ಯವಸ್ಥೆಗೆ
ಕೈಗೊಂಬೆಗಳಾಗಿ ಆಗಿ ಆಗಿ...

ಈಗ ಶಿಲುಬೆಗೇರಿದ ತಾಯಿನುಡಿ
ಹೇಲುತ್ತಿದೆ ಹೀಗೆ:
‘ಕ್ಷಮಿಸಿವರ ನೆಲೆ ತಂದೆ
ತಾವೇನ ಗೈದಪೆವೆಂದರಿಯ
ರಿವರು’

- ಲಕ್ಷ್ಮೀಶ ಚೊಕ್ಕಾಡಿ

ಲಕ್ಷ್ಮೀಶ ಚೊಕ್ಕಾಡಿ

ಲೇಖಕ ಲಕ್ಷ್ಮೀಶ ಚೊಕ್ಕಾಡಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿಯವರು. ನಿವೃತ್ತ ಶಿಕ್ಷಕರು. ಸುಳ್ಯ ತಾಲೂಕು 21 ನೇ ಕನ್ನಡ ಸಾಹಿತ್ಯ (2017) ಸಮ್ಮೇಳನಾಧ್ಯಕ್ಷರಾಗಿದ್ದರು.

ಕೃತಿಗಳು: ವರ್ತುಲ (ಕವನ ಸಂಕಲನ), ವಿಕಾಸದ ನಿಜಬಣ್ಣ (ಕವನ ಸಂಕಲನ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು, ವಿಮರ್ಶೆ ಬರಹಗಳು ಪ್ರಕಟವಾಗಿವೆ.

More About Author