Poem

ನಿತ್ಯೋತ್ಸವ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ….

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್

ಕೆ.ಎಸ್. ನಿಸಾರ್ ಅಹಮದ್

ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು.

ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು.
ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1994ರಲ್ಲಿ ನಿವೃತ್ತರಾದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ (1984-87) ಆಗಿದ್ದರು. ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ (2003) ಪ್ರಶಸ್ತಿ, ಶಿವಮೊಗ್ಗದಲ್ಲಿ ಜರುಗಿದ 73ನೇ ಕನ್ನಡ ಸಾಹಿತ್ಯ (2006) ಸಮ್ಮೇಳನದ ಅಧ್ಯಕ್ಷತೆ, ಗೊರೂರು ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹೆಜ್ಚೆಗುರುತು ಕೃತಿಗೆ ಸೋವಿಯಟ್ ಲ್ಯಾಂಡ್ ಪ್ರಶಸ್ತಿ,  2006 ರ ಮಾಸ್ತಿ ಪ್ರಶಸ್ತಿ * ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1981ರ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ. 

ಇವರ ಮುಖ್ಯ ಕೃತಿಗಳು: ಮನಸು ಗಾಂಧಿಬಜಾರು, ನಿತ್ಯೋತ್ಸವ, ನವೋಲ್ಲಾಸ, ಸಮಗ್ರ ಭಾವಗೀತೆಗಳು, ಅಚ್ಚುಮೆಚ್ಚು, ಒಥೆಲೊ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಂ, ಬರೀ ಮರ್ಯಾದಸ್ಥರೇ, ಹಿರಿಯರ ಹರಸಿದ ಹೆದ್ದಾರಿ, ಇದು ಬರಿ ಬೆಡಗಲ್ಲೋ ಅಣ್ಣ ಇತ್ಯಾದಿ. ಅವರು 2020 ಮೇ 03ರಂದು ಇಹಲೋಕ ತ್ಯಜಿಸಿದರು. 

More About Author