Poem

ನದೀ ಮಾತೆ

ಕಿರುಬೆರಳ ಗಾತ್ರದಲಿ।
ಜನಿಸಿ ತೊರೆಯೆಂದೆನಿಸಿ।
ಲಾಸ್ಯದಲಿ ಬಳುಕಿ ನದಿಯಾಗಿ ಹರಿದು॥
ಗಿರಿ ಕಣಿವೆ ದಾರಿಯೊಳು।
ಸಾಗಿದಳು ವೇಗದಲಿ।
ತನ್ನ ಪಯಣವನು ಹೆಮ್ಮೆಯಲಿ ನೆನೆದು॥

ನಾ ಬಂದ ಹಾದಿಯಲಿ।
ಬೆಳೆದಿರುವ ಪೈರೆನಿತು।
ಬದುಕಿದವು ಅಗಣಿತದ ಜೀವಜಾಲ॥
ನಾಳೆಗಳ ಅಂಕುರವ।
ತಾಯಾಗಿ ಪೊರೆದಿರುವೆ।
ಫಲಿತವನು ಹೇಳಲಿದೆ ಬರುವಕಾಲ॥

ಹಿಗ್ಗಿನಲಿ ಸಾಗುತಿರೆ।
ಎದುರಾಯ್ತು ಹಿರಿಗಡಲು।
ನೂರು ನದಿಗಳ ನುಂಗಿ ಮೆರೆದ ಧೀರ!
ಕರಗಿಹೋಗಲೆಬೇಕು।
ಅದುವೆ ನಿಯತಿಯ ಬರಹ।
ಏಕೆ ಹೀಗೆಂದು ಕೇಳುವುದು ಯಾರ?

ಸುಲಭವೇನೇ ಹೇಳು।
ಕರಗಿಬಿಡುವುದು ಹೀಗೆ।
ತನ್ನತನವೆಲ್ಲವನು ಕಳೆದುಕೊಂಡು॥
ನದಿಯತನವನು ತೊರೆದು।
ಕಡಲಾದೆ ನಾನೆಂಬ।
ಭ್ರಮೆಯನ್ನೆ ನಿಜವೆಂದು ನಂಬಿಕೊಂಡು॥

ತಡೆಯಬಲ್ಲುದೆ ಕಡಲು।
ಜೀವದಾಯಿನಿಯೊಡಲ?
ಮುಗಿಲಾಗಿ ಹಾರುವಳು ಬಾನಿನೆಡೆಗೆ॥
ಮಳೆಯಾಗಿ ಇಳೆಗಿಳಿದು।
ಲೋಕವನು ಪೊರೆಯುವಳು।
ತಾಯಲ್ಲವೇ ಅವಳು ಕಟ್ಟಕಡೆಗೆ॥

- ಮಾನಸಾ ಕೀಳಂಬಿ

ವಿಡಿಯೋ
ವಿಡಿಯೋ

ಮಾನಸ ಕೀಳಂಬಿ

ಕವಯತ್ರಿ ಮಾನಸ ಕೀಳಂಬಿ ಅವರು ಶಿವಮೊಗ್ಗ ಜಿಲ್ಲೆಯ ಕೀಳಂಬಿಯವರು. ತಂದೆ ಕೆ. ವಿ. ವಿಜಯೇಂದ್ರ, ತಾಯಿ ಉಮಾ. ವಿದ್ಯಾರ್ಥಿ ಇದ್ದಾಗ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿಧರರು. ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ (ಪ್ರಾತಿನಿಧಿಕ)” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರ ಸಂಶೋಧನಾ ಪ್ರಬಂಧ 'ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿದೆ. 

ಪದವಿ ತರಗತಿಗಳಿಗೆ ಕನ್ನಡ ಉಪನ್ಯಾಸಕರಾಗಿ, ತಮಿಳುನಾಡು ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. "ಸಂವಿತ್ ಸಂಶೋಧನಾ ಸಂಸ್ಥೆ"ಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕಾಗಿ ಕಥೆಗಳನ್ನು ರಚಿಸುವ, ಚಟುವಟಿಕೆಗಳನ್ನು ಸಂಯೋಜಿಸುವ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಜವಾಬ್ದಾರಿಯುತ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು, ಕವಿತೆಗಳು ಪ್ರಕಟವಾಗಿವೆ. 

ಕೃತಿ;  ಎಂ ಕೆ ಇಂದಿರಾ, ಬನಿಬರಹ,  "ಸುಲಭವೇನೇ?" ಮತ್ತು "ಮರೆತುಹೋಗುವ ಮುನ್ನ" ಕವನ ಸಂಕಲನಗಳು. "ಶಿಶಿರ ಕಳೆದ ಮೇಲೆ"(ಜೀವನ ಪ್ರೀತಿಯ ತುಣುಕುಗಳು) ಲೇಖನಗಳ ಸಂಗ್ರಹ. "ಆಯುರ್ವೇದ - ಅರಿವು, ಅಭ್ಯಾಸ, ಆರೋಗ್ಯ" ಎನ್ನುವುದು ಹಿರಿಯ ಆಯುರ್ವೇದ ವೈದ್ಯರಿಂದ ಮಾಹಿತಿಯನ್ನು ಸಂಗ್ರಹಿಸಿ ನಿರೂಪಿಸಿದ ಕೃತಿ. 

More About Author