ಮುಗಿಲ ಮೇಲಿನ ಅಮೃತ ಬಿಂದು
ಮೂಡಲಮನೆಯ ಮುತ್ತಾಗಿ ಬಿತ್ತಿ
ಭೃಂಗದ ಬೆನ್ನೇರಿಯೂ ಮಿಂಚಿ
ಮಾಯವಾಗದ ಮಂದಹಾಸನಿವ..
ಸ್ವಾರ್ಥವಿರದ ಅರ್ಥವಿರುವ
ಭಾವಗೀತ ಗಾರುಡಿಗ
ಬೇವಿನ ಕಹಿ ಬಾಳಲಿ
ಹೂವಿನ ನಸುಗಂಪು ಜೀವಕಳೆಯವ..
ಕಣ್ಣಲಿ ಕಾಲೂರಿದ ಮಳೆಯಲೂ
ದುಃಖ ಮರೆಸಿ ಹುಚ್ಚು
ನಗಿ ನಕ್ಕು ಹೊನಲು ಹರಿಸಿದವ
ಒಲವ ತೋಳಬಂದಿಯಾದವ
ಮುತ್ತತುತ್ತ ಅದಕು ಇದಕು ಹಂಚಿಕೊಂಡವ..
ರಾಗರತಿಯ ನಂಜ ಮುಗಿಲಿಗೇರಿಸಿ
ಸಂಜೆಹೆಣ್ಣ ಹೆರಳಲಿ ಅರಳುಮಲ್ಲಿಗಿ ಮುಡಿಸಿ
ನೊರೆತೆರೆಯಾಟದಂಥ ಮಾತಾಡಿ
ಮಾಯೆಯಾಗೇ ಬದುಕಿದವ..
ತನ್ನ ಪಾಡನೆಷ್ಟೋ ಉಂಡು
ಹಾಡನಷ್ಟೇ ನೀಡಿದ ರಸಿಕ
ಚೆಲುವಿನಲೆ ನಲಿವಾದ ಒಳಿತಿನಲೆ
ಬಲವಾದ ನಿಜದಲ್ಲೆ ಬದುಕಿದವ..
ಕಲಿಯುತ ಬೆಳೆಯುತ ತಾಳುತ
ತೆರೆದವ ಎಚ್ಚರದ ಕಣ್ಣು
ರಸವಾಗಿ ಉದ್ಭವಿಸಿ ವಿರಸ
ಮಣಿಸಿ ಸಮರಸವಾದ ಜೀವ..
--ಅಮೃತಾ ಮೆಹೆಂದಳೆ
ಅಮೃತಾ ಮೆಹೆಂದಳೆ
ಅಮೃತಾ ಮೆಹೆಂದಳೆ ಅವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿದ್ದು, ಸಾಹಿತ್ಯ ಚಟುವಟಿಕೆ: ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರಕಟಿತ ಕೃತಿ: 2003 ರಲ್ಲಿ " ಮೌನದ ಮಾತುಗಳು" ಕವನ ಸಂಕಲನ ಪ್ರಕಟವಾಗಿದೆ. 2017 ರಲ್ಲಿ " ಹನಿಯೆಂಬ ಹೊಸ ಭಾಷ್ಯ " ಹನಿಗವನ ಸಂಕಲನ ಪ್ರಕಟವಾಗಿದ್ದು, " ಚೇತನಾ" ಸಾಹಿತ್ಯ ಪ್ರಶಸ್ತಿ, " ಅಡ್ವೈಸರ್" ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ " ಪರೀಕ್ಷಾ ಪದ್ಧತಿ" ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ "ಕವಿತೆ 2016" ಸಂಪಾದಿತ ಕೃತಿ 2021 ರಲ್ಲಿ ಬಿಡುಗಡೆಯಾಗಿದೆ.
More About Author