Poem

ಬಾಗಿಲಿಲ್ಲದ ಬದುಕು 

ದಯೆಯುಳ್ಳಾತ ಬದುಕೊಂದ ದಯಪಾಲಿಸಿದ್ದಾನೆ
ಬಾಗಿಲಿಡುವುದನ್ನು ಮರೆತಿದ್ದಾನೆ

ನನ್ನ ಮನವಿಯನ್ನಾತ ಕೇಳಿಸಿಕೊಂಡುದುದರ ಬಗ್ಗೆ ಖಾತರಿಯಿದೆ
ಬಹುಶಃ ದನಿ ಮಾತ್ರವೇ ಕೇಳಿರಬೇಕು
ಧಾತು ದಾರಿಯಲ್ಲೆಲ್ಲೋ ಜಾರಿಬಿದ್ದಿರಬೇಕು
ಚಳಿಗೆ ಚಾದರ ಬೇಡಿದ್ದೆ
ಮಳೆಗೆ ಮರೆ ಬೇಡಿದ್ದೆ
ಗಾಳಿಗೆ ಗವಸಣಿಗೆ ಬೇಡಿದ್ದೆ
ಸುಡುವ ಬಿಸಿಲಿಗೆ ಸೊಡರೊಂದ ಬೇಡಿದ್ದೆ
ಚಳಿ-ಮಳೆ-ಗಾಳಿ-ಬಿಸಿಲು ಬಾರದಂತೆ
ದಯೆಯುಳ್ಳಾತ ಬಾಗಿಲಿಲ್ಲದ ಬದುಕೊಂದ ದಯಪಾಲಿಸಿದ್ದಾನೆ

ದಯೆಯೀಯದ ಅತಿಕರುಣಿಯೇ
ಮನೆ ಬೇಕೆಂದು ಬೇಡಿದ್ದು ನಿಜ
ಚಳಿಯಿಂದಲೋ ಮಳೆಯಿಂದಲೋ ಗಾಳಿಯಿಂದಲೋ ಬಿಸಿಲಿಂದಲೋ ತಪ್ಪಿಸಿಕೊಳ್ಳಲಿಕ್ಕಲ್ಲ

ಗುರುತ್ವದ ಗೆರೆ ದಾಟಿ
ನೆಲದ ಅಂಟು ಆರಿ
ತೆಳುಗಾಳಿಗೂ ಅಳುಕಿ ಹಾರಾಡುವ ಕನಸುಗಳ ಕಾಪಾಡಲು
ಗಾಳಿಯ ಗಮನಕಳೆವ ಗವಸಣಿಗೆ ಬೇಡಿದ್ದೆ
ಬಿರುಗಾಳಿಯ ಎಳೆಯನ್ನೂ ಒಳಬಿಡದ ಗಟ್ಟಿಮುಟ್ಟಾದ ಮನೆ
ಕಿಟಕಿಯನ್ನಾದರೂ ಕರುಣಿಸೆಂದು ಮತ್ತೆ ಕೋರುವ ಬಯಕೆ
ಕೂಗು ಮಾತ್ರವೇ ತೆರಳಿ
ತಿರುಳು ಕೊರಳಲ್ಲೇ ಸೋರಿಹೋದೀತೆಂಬ ದಿಗಿಲು

ವಿಧಿ ಕಳಿಸಿದ ಕಸರತ್ತುಗಳ ಧಾರೆ ದಾಳಿಯಿಡುತ್ತಿತ್ತು
ಕಲ್ಲ ಎದೆ ಸೀಳುವ ಉಳಿಮೊನೆಯ ಹನಿಗಳು
ಗುಂಗಾಡಿಯಂತೆ ಗುಯ್‌ಗುಡುತ್ತಾ ಬೆಂಬತ್ತಿದ್ದವು
ಆ ಮಳೆಯಿಂದ ಮಯ್ತಪ್ಪಿಸಿಕೊಳ್ಳಲು ಮರೆಯೊಂದ ಬೇಡಿದ್ದೆ
ಬಿರುಮಳೆಗೂ ಬಗ್ಗದ ಬೆಂಗಾಡಿನ ಮನೆ
ತುಂತುರು ಪುಳಕವ ತಾಗಿಸಿಕೊಳ್ಳಲು ಜನಾಲವನ್ನಾದರೂ ಬೇಡುವ ಬಯಕೆ
ಸಿಡಿಲ ಸದ್ದಿಗೆ ಶಬ್ದ ಸಾಯುವ ಅಂಜಿಕೆ

ಹೊಗೆಯ ಹೆಗಲಿಗೆ ತಂಡಿಯ ತೂಕವಿಟ್ಟು
ಚಿಮಣಿಯ ಇಳಿಜಾರ ಒಳಹೊಕ್ಕು
ನೆರಳಿಗೂ ನಡುಕ ಹುಟ್ಟಿಸುವ ತಂಪು ನೋವಿನಿಂದ
ಖುಷಿಯ ಬಿಸಿ ನೀಡುವ ಚಾದರವ ಬೇಡಿದ್ದೆ
ಹಿಮಮಂಜಿನ ದಾಳಿಗೂ ಹೆದರದ ಮನೆ
ಉಸಿರ ಬಿಸಿಗೆ ತಣ್ಣನೆಯ ಸಂಗಾತಿಗಾಗಿ ಗೋಡೆಯಲ್ಲೊಂದು ಸಂದು ಬೇಡುವ ಬಯಕೆ
ಎದೆಯ ರಕುತ ಕಲ್ಲಾಗುವ ಭಯ

ತನ್ನೊಡಲ ಕೂಸು ನೆರಳ ನೆತ್ತಿಗೆ ದಾಹವಿಡಿಸಿ
ಕತ್ತಲಿನ ಕಣ್ತಪ್ಪಿಸಿ
ಇರುಳ ಭಯದಲ್ಲೇ ಬೀದಿ ಅಲೆಯುವ ಬೆಳದಿಂಗಳ ಸುಟ್ಟು
ಬದುಕ ದಾರಿಗಳ ಹೆಜ್ಜೆಗಳನು ಭಯದಲ್ಲಿ ಅಲೆಸುವ
ಬಿಸಿಲಿಂದ ಬಿಡಿಯಾಗಲು ಸೊಡರೊಂದ ಬೇಡಿದ್ದೆ
ಬಿರುಬೇಸಿಗೆಯನ್ನೂ ಬಟ್ಟೆಗೆಡಿಸುವ ಮನೆ
ಸೂರ್ಯನ ಬೆನ್ನಲ್ಲಿ ಕೂತು ಬೆಳಕು ನೋಡುವ ಬಯಕೆ
ಒಡಲು ಹೊತ್ತಿ ಬತ್ತಿ ಆವಿಯಾಗುವ ಅಳುಕು

ಚಳಿಗೆ ಚಾದರ ಬೇಡಿದ್ದೆ
ಮಳೆಗೆ ಮರೆ ಬೇಡಿದ್ದೆ
ಗಾಳಿಗೆ ಗವಸಣಿಗೆ ಬೇಡಿದ್ದೆ
ಸುಡುವ ಬಿಸಿಲಿಗೆ ಸೊಡರೊಂದ ಬೇಡಿದ್ದೆ
ದಯೆಯುಳ್ಳಾತನೇ ಹೇಳಿಬಿಡು
ಅಷ್ಟು ಅಸಹಾಯಕತೆಯಲ್ಲೂ ನಿನ್ನ ನೆನಯಬಾರದಿತ್ತೇ?

- ರಾಮಕೃಷ್ಣ ಸುಗತ

ರಾಮಕೃಷ್ಣ ಸುಗತ

ಯುವ ಬರಹಗಾರ ರಾಮಕೃಷ್ಣ ಸುಗತ ಅವರು ಜನಿಸಿದ್ದು 1991 ನವೆಂಬರ್‌ 4ರಂದು. ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿರುವ ಇವರಿಗೆ ಪ್ರವಾಸ , ಕತೆ ಕವನ ಬರೆಯುವುದು, ಹಾಡುಗಳ ರಾಗ ಸಂಯೋಜನೆ, ಕಿರುಚಿತ್ರ ನಿರ್ಮಾಣ ಹವ್ಯಾಸಿ ಕ್ಷೇತ್ರ. ಉರಿಯ ಪೇಟೆಯಲಿ ಪತಂಗ ಮಾರಾಟ ಇವರ ಚೊಚ್ಚಲ ಕವನ ಸಂಕಲನವಾಗಿದೆ. 

More About Author