Poem

ನಡುವೆ ಸುಳಿವ ನನ್ನತನ

ಚಿಕ್ಕಂದಿನಿಂದಲೂ ತುಂಡು
ಕೂದಲನ್ನೇ ಒಪ್ಪಿಕೊಂಡ
ನನಗೆ, ಉದ್ದ ಕೂದಲು
ಮತ್ತದಕ್ಕೊಂದು ಹೂವಿನ
ಮಾಲೆ ತೀರಾ ತೂಕವಾದದ್ದೇ

ಜೀನ್ಸ್ ಪ್ಯಾಂಟ್ ಗೊಂದು
ತುಂಡನೆಯ ಟಿ- ಶರ್ಟ್
ತೊಡುತ್ತಿದ್ದ ನನಗೆ, ಜರಿ
ಸೀರೆ ಅದಕ್ಕೊಂದು
ರೇಷ್ಮೆಯ ಶಲ್ಯ ಭಾರಿ
ಅಕ್ವರ್ಡ್ ಆದ್ದದ್ದೇ

ಬೇಕಾದ ಹಾಡನ್ನು
ಗುನುಗುತ್ತಿದ್ದ ನನ್ನ ನಾಲಿಗೆ
ಅಪರೂಪಕ್ಕೆ ದೇವರ ನಾಮ
ಪಠಿಸಲು ಹೋದಾಗ ಗುಡಿಯ
ಆಚೆಗೆ ನಿಂತ ಅಸ್ಪೃಶ್ಯನಂತೆ
ಮೌನವಾಗುತ್ತದೆ

ಈ ಕೀಳರಿಮೆಯ ಕುಣಿಕೆ
ನನ್ನಂತೆ ನಿಮ್ಮನ್ನು -
ಕಾಡಿರಬಹುದು
ಕಾಡುತ್ತಿರಬಹುದು

ಥತ್! ಈ ಕನ್ನಡಿಯ
ನೋಡುವುದ ಬಿಟ್ಟ
ದಿನವೇ ನಾನು ಬದಲಾದೆ
ಈಗ ನನಗೆ ನನ್ನ ಕೂದಲಾಗಲಿ
ನಾ ತೊಡುವ ಬಟ್ಟೆಯಾಗಲಿ
ಎಲ್ಲಕೂ ಮೀರಿ ನನ್ನೊಳಗಿನ
ವಕ್ರ ಗಳೇ ಕಾಣುತ್ತಿಲ್ಲ

ಅದಾಗ್ಯೂ ಕೊರಗುವ
ಕಾಲ ಬಂದರೆ, ಕಣ್
ಮುಚ್ಚಿ ಪಾದಗಳಿಂದ
ಮುಂದಾಗಿ ಬುರುಡೆ ತನಕ
ನನ್ನ ದೇಹವನ್ನು ನಾನೇ
ಮನಸ್ಸಿನ ಕೈಗಳಿಂದ
ಮುಟ್ಟಿಕೊಳ್ಳುತ್ತೇನೆ
ಹಗುರಾಗುತ್ತೇನೆ...

- ಸಂಘಮಿತ್ರೆ ನಾಗರಘಟ್ಟ

 

ಸಂಘಮಿತ್ರೆ ನಾಗರಘಟ್ಟ

ಮೂಲತಃ ತಿಪಟೂರಿನವರು. ತಂದೆ ಎನ್.ಕೆ ಹನುಮಂತಯ್ಯ, ತಾಯಿ ಶೈಲಜ ನಾಗರಘಟ್ಟ. ಆಂಗ್ಲ ಭಾಷೆಯಲ್ಲಿ ಎಂ.ಎ ಪದವಿ ಪಡೆದಿರುವ ಇವರು ರೇಖಾಚಿತ್ರ, ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರೊಟ್ಟಿಗೆ ಹಿಮಪಕ್ಷಿ ಎಂಬ ಮುಖ ಸಂಪುಟ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ.

More About Author