Poem

ಮನುಷ್ಯನೆಂಬ ತಾನಲ್ಲದ ಇತರೆ

ಮನುಷ್ಯನಿಗೂ ಅಕ್ಕಿಗೂ
ಹಸಿವು ಮತ್ತು ಅನ್ನದಾಚೆಗಿನ ನಂಟುಂಟಂತೆ
ಜೈವಿಕವಾಗಿ ಎರಡೂ
ನೂರರಲ್ಲಿಪ್ಪತ್ತೈದು ಪಾಲು ಒಂದೇ ಅಂತೆ

ಮನುಷ್ಯನನ್ನು ಮನುಷ್ಯನನ್ನಾಗಿಸುವ
ಗುಣತಂತುವಿನ ಕಾಲು ಪಾಲು ಭತ್ತದಲ್ಲೂ ಇದ್ದು
ಅಕ್ಕಿಯನ್ನು ಅಕ್ಕಿಯಾಗಿಸುವುದಂತೆ

ಮನುಷ್ಯನಿಗೂ ಹಸುವಿಗೂ ನಡುವೆ
ಬರೇ ಹಾಲುಮಾಂಸವಲ್ಲದ ಕೊಡುಕೊಳು
ವುಂಟಂತೆ

ಮನುಷ್ಯತ್ವದ ಮುಕ್ಕಾಲು ಪಾಲು
ಥೇಟು ಥೇಟಾಗಿ ಹಸುವೊಳಗೂ ಇದ್ದು ಹಸುವನ್ನು
ಹಸುವಾಗಿಸುವುದಂತೆ

ಅಲ್ಲದೆ ಮನುಷ್ಯನಲ್ಲಿ
ನೂರರಲ್ಲಿ ಎಂಬತ್ತೈದು ಅಳತೆ ನಾಯಿಯುಂಟಂತೆ
ತೊಂಬತ್ತಳತೆ ಬೆಕ್ಕುಂಟಂತೆ
ತೊಂಬತ್ತಾರು ಕೋತಿತನವುಂಟಂತೆ

ಹಾಗೇ ಶೇಕಡ ಅರವತ್ತು ಕೋಳಿಯೂ
ಅರವತ್ತೊಂದು ನೊಣವೂ
ಅರವತ್ತೆರಡು ಬಾವಲಿಯೂ ತೊಂಬತ್ತೆರಡು ಇಲಿಯೂ
ತೊಂಬತ್ತನಾಲ್ಕು ಹುಲಿಯೂ ಉಂಟೆಂಬುದಿದೆ
ಎಲ್ಲಕ್ಕಿಂತ ತೊಂಬತ್ತೆಂಟಕ್ಕು ಹೆಚ್ಚು ಗೊರಿಲ್ಲಾತನ
ವುಂಟೆನ್ನಲಾಗಿದೆ

ಅಂದಮೇಲೆ
ಮನುಷ್ಯನೆಂದರೆ ತಾನಲ್ಲದ ಇತರೆಯೇ
ಹೆಚ್ಚು ಹವುದಾಗಿದೆ

ಅದಕ್ಕೇನೇ
ಇವೊತ್ತಿಗೂ ಮನುಷ್ಯರೊಳಗೆ ಮನುಷ್ಯತ್ವವನ್ನು
ಹುಡುಕಲಾಗುತ್ತದೆ

- ನಾಗರಾಜ ವಸ್ತಾರೆ

ವಿಡಿಯೋ
ವಿಡಿಯೋ

ನಾಗರಾಜ ವಸ್ತಾರೆ

ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್‌, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.

More About Author