ಅಮ್ಮನಿಗೆ ಮಾಗಡಮ್ಮನೇ ಆಗಬೇಕು
ರಾಗಿ ಮಾಡುವುದಕ್ಕೆ !
ಮತ್ಸಾರ ಸಂಗಡವೂ ಸಮಾಧಾನವಿಲ್ಲ
ಅವಳ ಗೊಣಗೊಣದ ಹೇರಂಬ ರಗಳೆಗೆ
ರೇಗಿದರೆ ಯಾರಾದರೂ
ಕೂಡಲೇ ಗದರಿಸುತ್ತಿತ್ತು
” ಸುಮ್ಮನಿರ್‍ರೇ., ರಾಗಿ ಮಾಡುವುದೇನು ಹುಡುಗಾಟವಾ,,
ಮಣ್ಣುಳಿದು ಬಿಟ್ಟು ಹಿಟ್ಟಿನ ದ್ವಾರಾ
ಗಂಡಸರ ಹೊಟ್ಟೆಗೋದರೇನು ಗತಿ
ಶಿವಶಿವಾ ಮಲಮೂತ್ರ ಬಂದು
ತಿಳಕೊಳ್ರೇ
ನಾನು ಕಿಚಾಯಿಸುತ್ತಿದ್ದೆ
"ಒಹೊಹೊಹೊ
ಹೆಂಗಸರ ಹೊಟ್ಟೆಗೋದರೆ ಗತಿಗೇಡಲ್ಲವೋ
ಆ ಬಂದು ಅವರಿಗಾದರೂ
ಬಂದೇ ಅಲ್ಲವೋ”
ಅಮ್ಮ, ಕನಿಕರಪಟ್ಟು ನನ್ನ ಅಜ್ಞಾನಕ್ಕೆ
ಲೊಚಲೊಚಗುಟ್ಟುತ್ತ ಛಂದಸ್ಸಿಗೆ ತಕ್ಕಂತೆ
ಮೂರು ಮಾತ್ರಾಗಣದಲ್ಲಿ ಹೇಳುತ್ತಿತ್ತು:
“ಲೇ ಬೋಸುಡೀ
ನನಗೆ ಗೊತ್ತು ಕಣೆ ನಿನ್ನ ಪ್ರತಿಷ್ಠೆ
ಹೆಂಗಸರಿಗೆ ಹೊಟ್ಟೆಯಲ್ಲೆ ಮಣ್ಣಿರುತ್ತೆ ಕಣೆ
ಅದು ಫಲವೀವ ಬಾಗಾಯ್ತೆ”
ಅಲ್ಲವೇ ಮತ್ತೆ
ಹೊಟ್ಟೆಯನ್ನೆ ಹೊಲ ಮಾಡಿಕೊಂಡವರಿಗೆ
ಹೊರಗಿನಿಂದ ಗೊಬ್ಬರಗೋಡು ಸರಬರಾಜಾದರೆ
ಏನು ತೊಂದರೆ?
ಮಾಗಡಮ್ಮನನ್ನು ಹುಡುಕಾಡಿ
ನಿಪ್ಪಾಣಿಯ ಹಸನು ಹೊಗೆಸೊಪ್ಪಿನ ಮೋಡಿ
ಗವಳ ಈಡುಮಾಡಿ ಕೆಡವಿಕೊಳ್ಳುತ್ತಿತ್ತು
ಅಮ್ಮ ಪಡಸಾಲೆಗೆ; ಸಕಲ ಪರಿಕರ
ಗಳೂ ಸಜ್ಜುಗೊಂಡು ಜಮೆಯಾಗುತ್ತಿದ್ದರು
ಇಬ್ಬರೂ ರಾಗಿವಾಡೆಯ ಸಂದಿಗೆ
ಹೊಗೆಸೊಪ್ಪಿನ ಮೊದಲ
ರಸಬಿಂದುವಿಳಿದಿದ್ದೇ ತಡ ಪಟಗುಡುತ್ತಿತ್ತು
ಮಾಗಡಕ್ಕನ ಕೇತನ
ಎಡಗಾಲು ಮಂಡಿಸಿ
ಬಲತೊಡೆಯ ಮೂಲಕ್ಕೆ ಊರುಗೊಟ್ಟು
ಬಲಗಾಲು ನೀಡಿ ನೀಡಿದಾಗಿ
ಗೋಡೆಗೆ ಆತುಗೊಟ್ಟು ರೆಡಿಯಾಗುತ್ತಿದ್ದಳು ಮಾಗಡಕ್ಕ
ತೋಳುಗಳ ಕಟ್ಟಿಕೊಂಡು
ಜುಂಯಕ್ಕ ಜುಂಯ್ಯ ಜುಂಯಕ್ಕ ಜುಂಯ್ಯ ಜುಂಯ್ಯ
ಮೂಗುಜರಡಿಗೆ ರಾಗಿ ಸುರಿದು
ಹಗೂರಾಗಿ ಹಿಡಿದು ಮೊಣಕೈಗಳ ಗುಂಡಗೆ ಆಡಿಸಿ
ಆಡಿಸಿ ಆಡಿಸಿ ಆಡಿಸಿ
ನಿಲಿಸಿಕೊಳುವಳು ನಡೂಮಧ್ಯಕ್ಕೆ ಕಸಕಡ್ಡಿ ಗುಡ್ಡೆ
ಸುತ್ತಲೂ ಕತ್ತರಿಸಿದಂತೆ ನಿಲುತಿತ್ತು
ಉಳಿದ ಕಾಳುಕಡಿ ಗಟ್ಟಿ ಪಡೆ
ಇದು ಈ ಕತ್ತರಿಸುವುದು ಮೊದಲ ಸುತ್ತು
“ಬ್ಯಾಸಿ ಬ್ಯಾಸಿಗೆಗೂ ಬಳಿದು ಗಂಜು
ಇಗಾ ಇಂಗೆ ಕೊಂಡಿಬೆಳ್ಳು ಮಾಡಿಬಡುದ್ರೆ
ಅಗಾ ಅಂಗೆ ಕಣಕ್ ಅನ್ನಬೇಕು ಮೊರ
ಆಗ ಕೇಳ್ತದೆ ನಾವೇಳ್ದಂಗೆ ಬಗ್ತದೆ ಎಗ್ಗಸಲಕ್ಕೆ
ಲೂಜು ಬಿಟ್ಟೆವೋ ಕೆಟ್ಟಿವಿ
ಕಾಳೂ ಕಲ್ಲೂ ಏಕಕಾಲಕ್ಕೆ ಜಮಾ
ಕೆಳಗಿನ ಗೂಡೆಗೆ”
ಅನ್ನುತ್ತಿದ್ದಳು ಮಾಗಡಕ್ಕ
ಜಗ್ಗುಲಜಗ್ಗು ಜಗ್ಗುಲಜಗ್ಗು ಜಗ್ಗುಲಜಗ್ಗು ಜಗ್ಗುಲಜಗ್ಗು
ಲಯ ಹಿಡಿದು ಹೆಗ್ಗಲಿಸಿದರೆ ನಮ್ಮ ಮಾಗಡೂ
ಹೆಗ್ಗಲ್ಲೇ ಅಲ್ಲ ಕಿರುಪಿರು ಕಲ್ಲು ಸಮೇತ ಹೆದರಿ
ಸೆರೆಯಾಗುತ್ತಿದ್ದವು ಮೊರದ ಮೂಲೆಗೆ
ಕಲ್ಲು ಕಳಕೊಂಡ ರಾಗಿ
ನಿಸೂರುಗೊಳುವುದು ಗೂಡೆಯೊಳಗೆ
ಇದು ಹೆಗ್ಗಲಿಸುವ ಸುತ್ತು
ಕುಲಕ್ಕುಲಕ್ಕು ಕುಲಕ್ಕುಲಕ್ಕು ಕುಲುಕುಲು ಕ್ಳಕ್ಕು
ಮೊರದ ಸೊಂಟವ ಕುಣಿಸುತ್ತ ಕುಣಿಸುತ್ತ
ಒನೆಯುತ್ತಿದ್ದರೆ ಮಾಗಡಮ್ಮ
ನರ್ತಿಸುತ್ತಿತ್ತು ರಾಗಿಕಾಳು ವೈಯ್ಯಾರದಿಂದ
ಕುಲುಕುಲುವ ಉಂಡುಗಾಳು ಕಿಲಕಿಲ ನಗುತ್ತ
ಗಿರಿಗಿಟ್ಟಲೆಯಾಡುತ್ತಾ ಆಡುತ್ತಾ ಆಡುತ್ತಾ
ಮೊರದ ಮುಂದಕ್ಕೆ ಬಂದು ಜಾರಿ ಬಿಡುತ್ತಿತ್ತು
ದಸಿಗಸಿಯಿದ್ದರೆ ಪಾಪ, ದಪ್ಪ ಮೈಯೆತ್ತಿ ಕುಣಿಯಲಾರದೆ
ಸೋತು ಸರಿಯುತಿದಮ ಹಿಂದಕ್ಕೆ : ಇದು
ಇದು ನೋಡಿ ಒನೆಯುವ ಮೂರನೇ ಸುತ್ತು
ಕೊನೆಯ ಸುತ್ತು
ಏನಿದ್ದರೂ ಎದ್ದುನಿಂತೇ ಕೈಗೊಳ್ಳತಕ್ಕಂತದ್ದು
ಮೊರದ ಕುಂಡಿಯ ಭಾಗ ಗಟ್ಟಿ ಹಿಡಿದು
ಎತ್ತೆತ್ತಿ ಮೂಗಿನವರೆಗೆ ಕೇರಬೇಕು ಎದುರುಗಾಳಿಗೆ
ಚ್ಚೊಚ್ಚೋ ಚೊಕ್ಕುಳಚೊಕ್ಕೊ ಚ್ಚೊಚೋ ಚೊಕ್ಕುಳ ಚೊಕ್ಕೊ
ಮಾಗಡಮ್ಮ ಎದುರೆತ್ತಿ ಕೇರುತಿರಲು
ಊಗು ಪಾಗುಗಳೆಲ್ಲ ಚೆದುರಿ
ದಿಕ್ಕಾಪಾಲು
ಮಾಗಡಮ್ಮ ಉಘೇ ಉಘೇ
ಮಾಗಡಮ್ಮ ಉಘೇ ಉಘೇ
ಮಾಗಡಮ್ಮ ಉಘೇ ಉಘೇ
ಇಲ್ಲಿಗೆ ಸಕಲ ಸುತ್ತು
ಗಳೂ ಸಂಪನ್ನಗೊಂಡು
ಆಮೇಲಿನಿದೇನಿದ್ದರೂ ಚೀಲಕ್ಕೆ ತುಂಬಿ
ಬಾಯಿವೊಲಿದು ಅಲ್ಲಲ್ಲಿಗೆ ಎತ್ತಿಟ್ಟು ಎಳೆಯುವ
ಕೂಡಿಸುವ ಗಂಡಸರ ಸರಬರ
ಈಗ
ರಾಗಿ ಕ್ಲೀನ್ ಮಾಡುವ ಮಿಷನ್ನು
ಮುಂದೆ ಕೇಜಿಗೋ ಎರಡು ಕೇಜಿಗೋ
ಚೀಲ ಹಿಡಿದು ನಿಂತಾಗ
ಸುಳಿಯುತ್ತಾಳೆ ನೆನಪಿನಲಿ ಮಾಗಡಮ್ಮ
ಎರಡೂ ಮೂಗಿನ ಬೇಸರಿಯ ಹೊಳೆಸುತ್ತ
ಎಡದವಡೆಯ ತಾಂಬೂಲ ಬಲದವಡೆಗೆ ಹೊರಳಿಸುತ್ತ
ನಕ್ಕೆನ್ನ ಸ್ವಾಟೆ ತಿವಿಯುತ್ತ
ಯಾವ ರಾಗವಿದೆ ತಾಳವಿದೆ ಈ ಮಿಷನ್ನಿಗೆ
ಗೊರ್‍ರೋ ಗೊರ್‍ರೋ ಗೋರ್‍ರರ್‍ರಗೊರ್‍ರೋ ಗೊರ್‍ರೋರ್‍ರೋ
ಒಂದೇ ಕೂಗುಮಾರಮ್ಮ ಗಂಟಲಿಂದ ಹೊಟ್ಟೆವರೆಗೆ
ಅಷ್ಟಕ್ಕೂ ಮಣ್ಣಿರುವುದಿಲ್ಲ
ಎಂಬ ಗ್ಯಾರಂಟಿಯೇನಿದೆ
ಮಿಷನ್ನು ಮಾಡಿದ ರಾಗಿಯೊಳಗೆ?
ಮಲಮೂತ್ರ ಯಾವಾಗಲಾದರೂ
ಬಂದಾಗಬಹುದು ಗಂಡಸಿಗೂ
ಹೆಂಗಸಿಗೂ!
-ಲಲಿತಾ ಸಿದ್ದಬಸವಯ್ಯ
ಲಲಿತಾ ಸಿದ್ದಬಸವಯ್ಯ
ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ.
‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ.
‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ.
More About Author