
ನದಿಯಂತೆ ಭೋರ್ಗರೆದು
ಹರಿದಿದ್ದಲ್ಲ ನನ್ನ ಕವಿತೆ...!
ಎಂದೂ ಬತ್ತದ
ಸಣ್ಣದೊಂದು ಒರತೆ...!!
ಹೊಲಿಗೆ ಯಂತ್ರದಂತೆ
ಯಾoತ್ರಿಕವಾಗಿ ಹೊಲೆದದ್ದಲ್ಲ...
ನನ್ನ ಕವಿತೆ
ಸಣ್ಣ ಸೂಜಿಯಲಿ
ಬೆಸುಗೆಯ ದಾರ ಹಾಕಿ
ಕಂಗಳ ಒತ್ತಿ ಹಿಡಿದು
ಮೆಲ್ಲಗೆ ಹರಿದ ಮನಸುಗಳ
ಹೊಲಿದ ಕವಿತೆ...ಒಲಿದ ಕವಿತೆ....!
ಮಿನುಗುವ ನಕ್ಷತ್ರವಲ್ಲ
ನನ್ನ ಕವಿತೆ...
ಸೆರಗಲ್ಲೆ ಕಟ್ಟಿಕೊಂಡ
ತೀರಾ ಸಣ್ಣದೊಂದು
ಕೆಂಡದುಂಡೆ....!!
ಬಾಂದಳದ ಚಂದಿರನಲ್ಲ
ನನ್ನ ಕವಿತೆ....
ಆಗೊಮ್ಮೆ ಈಗೊಮ್ಮೆ
ಸುಳಿದು ಬಿಡುಬಹುದಾದ
ಕೊಲ್ಮಿoಚು....!!
ಎದೆಯ ಕಾರ್ಗತ್ತಲನೆ ಸೀಳಿ
ತಟ್ಟಿ ಬಿಡುವ
ಮುಟ್ಟಿ ಬಿಡುವ
ನುಸಿಳಿ ಬಿಡುವ ಸುಳಿಮಿಂಚು....!!
ಸುಕೋಮಲ ಕಮಲ
ಮುಖಿ ಅಲ್ಲ ನನ್ನ ಕವಿತೆ
ಹರೆಯದರಲ್ಲೇ ಗಂಡನ
ಕಳಕೊಂಡ ಮುಂಡೆ...!!
ಅದಕೆ ಆಗುವಳು
ಆಗಾಗ ಮುಖಾ ಮುಖಿ
ಅವಳೇ ನನ್ನ ಆಪ್ತ ಸಖಿ....!!
ಅವನೇ ಅವಳಾಗಿ
ಅವಳೇ ಅವನಾಗಿ
ಸವೆಸಿ ಬಿಡುವ ಜೀವನ
ನನ್ನ ಕವಿತೆ...
ಅಲಂಕಾರಗಳಿಲ್ಲದ
ನಿರಾಭರಣ ಸುಂದರಿ
ನನ್ನ ಕವಿತೆ....
ಮೊನಾಲಿಸಾಳ ಮುಗುಳು
ನಗೆಯoತೆ....!!
ಬೆಟ್ಟದಷ್ಟು ನಿರೀಕ್ಷೆ ಇಲ್ಲ
ನನ್ನ ಕವಿತೆಗೆ...
ಸಾಸುವೆ ಅಷ್ಟು ಜಾಗ ಇದ್ದರೂ
ಸಾಕು ನಿಮ್ಮ ಎದೆಯೊಳಗೆ...!!
ಹಾರ್ಟ್ ಅಟ್ಯಾಕ್ ಆಗಲು
ಇನ್ನೇನು ಬೇಕು..?
ಸರಳವಾಗಿವೆ ಎಂದು
ದೂರಬೇಡಿ ನನ್ನ ಕವಿತೆ...
ಸರಳವಾದರೂ ಸತ್ತ
ಹೃದಯವನ್ನೂ ಅರಳಿಸಿ
ಬಿಡಬಹುದಾದ ವಿರಳ ಕವಿತೆ...!!
ದೇವರಾಜ್ ಹುಣಸಿಕಟ್ಟಿ
ಕವಿ, ಲೇಖಕ ದೇವರಾಜ್ ಹುಣಸಿಕಟ್ಟಿ ಅವರು ಮೂಲತಃ ರಾಣೇಬೆನ್ನೂರಿನ ಹುಣಸಿಕಟ್ಟಯರು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಓದು, ಬರಹ ಇವರ ಅಚ್ಚುಮೆಚ್ಚಿನ ಹವ್ಯಾಸ.
More About Author