Poem

ಕಾಯುತ್ತ ನಿಂತವರು

ಉದ್ದುದ್ದ ಸರದಿಯಲ್ಲಿ
ನಿಂತವರು ಕಾಯುವವರು
ಆ ತುದಿಯ ದಿಟ್ಟಿಸಿ
ನಿಲ್ಲುವರು ಮೈಮರೆತು

ಸಿಹಿನೀರು ಬಾವಿಯಲಿ ಉಕ್ಕೀತು
ಬೆವರ ಕೊಳೆ ತೊಳೆದೀತು
-ಇದು ಒಂದು ನಿರೀಕ್ಷೆ

ಆ ತುದಿಯಲ್ಲಿ ನಿಂತ
ಗಳಿಗೆ ಹೀಗೆಲ್ಲ
ಅನ್ನಿಸುವುದು ಸಹಜ

ಅಂಗುಳ ತೂತು ಕೊರೆದು
ಬ್ರಹ್ಮರಂಧ್ರ ಭೇದಿಸಲು
ನಿಂತ ಹಠಯೋಗಿಯಂತೆ
ನಿಂತ ಕಾಲುಗಳನ್ನೆತ್ತಿ
ಆಕಡೆ ಈಕಡೆ ಬೀಸಿ
ಕಾಯುವರು
ಇವರು

ಮಾಡಲ್ಲದ ಮಾಡಿಗೆ
ಬೆಚ್ಚನೆಯ ಗೂಡಿಗೆ
ಕನಸುತ್ತ ಕಾಯುತ್ತ
ಧ್ಯಾನಕ್ಕೆ ಜಾರುವರು
ನಿಂತು ನಿಜವಾದವರು

- ತಾರಿಣಿ ಶುಭದಾಯಿನಿ

ತಾರಿಣಿ ಶುಭದಾಯಿನಿ .ಆರ್

ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು.  ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ.  ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ.

ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ಆಯಾಮದ ಅರ್ಥ ನೀಡಿದವರಲ್ಲಿ ಒಬ್ಬರು.

More About Author