ಪಾದ-1
ಕಥೆಗಳ ನುಂಗುವ ಕಾಲರುದ್ರ
ನಿಂತಿದ್ದಾನೆ ಬಟ್ಟಂಬಯಲಲೇ
ಕಾಡಿನಗಲ ಬಾಯಿ ತೆರೆದು
ನದಿಯುದ್ದ ನಾಲಿಗೆ ಹಿರಿದು
ಸಣ್ಣಕಥೆ ದೊಡ್ಡಕಥೆ
ಹಿರಿಕಥೆ ಮರಿಕಥೆ
ಆ ಕಥೆ ಈ ಕಥೆಗಳ ರಾಶಿ
ತಮ್ಮಷ್ಟಕ್ಕೇ ಉರುಳುತ್ತಾ ಬಂದು
ಜಮಾಯಿಸುತ್ತವೆ ಬಲಿಪೀಠದ ತುಂಬಾ
ಕಥೆಯಾಗದ ಬೋಳು ಮೈದಾನದಲ್ಲಿ
ಸರದಿಯಲಿ ಕಾಯುತ್ತವೆ
ಕಾಲರುದ್ರನಿಗೆ ನೈವೇದ್ಯವಾಗಲು.
ಕೈಗೆ ಸಿಕ್ಕಸಿಕ್ಕ ಚೆಂದದ ಕಥೆಯೆಳೆದು
ಲಟಕ್ಕನದರ ಗೋಣು ಮುರಿದು
ಕುದಿವ ಬಿಸಿನೆತ್ತರು ಆಪೋಷಿಸಿ
ಕಥೆಯುದರ ಸೀಳಿ
ಮಾಂಸ ಮಜ್ಜೆಗಳ
ಸಿಗಿಸಿಗಿದು ಮೆದ್ದು
ಕುಣ ಯುತ್ತಿದ್ದಾನೆ ಮದವೇರಿದ ಕಾಲರುದ್ರ.
ಪಾದ-2
ಬಣ್ಣ ಬಣ್ಣದ ಚೆಂದುಳ್ಳಿ ಕಥೆಗಳ
ಆ ರಸ ಈ ರಸ ಎಂಥೆಂತದೋ ರಸ
ಒಂದರೊಳಗಿನ್ನೊಂದು ಬೆರೆತುಹೋಗಿ
ಕಾಲರುದ್ರನ ಉದರ
ಸೀಮಾತೀತ ಕಡಲಿನಲ್ಲೀಗ....
ಖಂಡುಗಗಟ್ಟಲೇ ಕಥೆಗಳು!
ಒಂದಕ್ಕೊಂದು
ತೆಕ್ಕೈಸಿ ಮಥಿಸಿ ಕೂಡಿ
ಆ ಮಿಲನಕ್ಕೆ ಸಾಕ್ಷಿಯಾಗಿ
ಕಾಲರುದ್ರನೊಡಲಿಂದ
ಜನ್ಮ ತಳೆದುಬಿಟ್ಟಿದ್ದಾಳೀ ಶಿವೆ!
ಬವಳಿ ಬಿದ್ದಿದ್ದಾನೆ ಕಾಲರುದ್ರನೇ...
ಪಾದ – 3
ಉಟ್ಟಿಲ್ಲ ತೊಟ್ಟಿಲ್ಲ
ಪಟ್ಟೆಪೀತಾಂಬರ
ಅವಳೊಂದೊಂದು ರೋಮಕ್ಕೊಂದೊಂದು
ಕಾಲರುದ್ರನೊಡಲಿನ ಶಿವೆ
ವೇದನೆಯ ಕಥೆಯಿರಬಹುದೇನೊ ಕಾಣೆ!
ದುಗುಡದಲಿ ಕುಳಿತುಬಿಟ್ಟಿದ್ದಾಳಯ್ಯೊ
ಶಿವೆ ಮಾತಿಲ್ಲದೇ...
ಕಥೆ ಮೇಯ್ದವನ ಉದರದಲಿ ಹುಟ್ಟಿದವಳು!
ಮಾತಿಲ್ಲದಿದ್ದರೆ ಹೋಯ್ತು
ಮಾತಿಗೊಂದೇ ಅರ್ಥ
ಸಾವಿರದರ್ಥವಲ್ಲವೇ ಮೌನಕ್ಕೆ!
ಕರುಳೊಳಗೆ ಗೊಬ್ಬುಳಿ ಹಾಕಿ
ಗಿರ್ರನೆ ತಿರುಗಿಸಿದಂತೆ
ಜೀವ ಒಳಗೆಂತು
ತಳಮಳಿಸುತಿದೆಯೋ....
ಆ ವೇದನೆಯವಳ ಮೊಗದ ಮೇಲೆ.
ಅವಳ ಹೊಟ್ಟೆಯೊಳಗಿನ ಕಿಚ್ಚು
ಬಿರು ಬಿಸಿಲಿಗೆ ಭಗ್ಗೆಂದು
ಊರೂರಿಗೆ ಕಾಳ್ಗಿಚ್ಚು ಬಿದ್ದು
ಮನೆ ಮಾರು ಸುಟ್ಟು ಉರಿದೀತು!
ಸಂತೈಸುವುದಾದರೂ ಹೇಗವಳನ್ನು?
ಪಾದ -4
ಕೊನೆಗೊಮ್ಮೆ ತನ್ನಂತೆ ತಾನೇ ಎಚ್ಚೆತ್ತು
ಎಲ್ಲ ಸುಡುಬೇಗುದಿ ಬಿಸುಟು
ನವುಲೇ ಮೈಯೊಳಗೆ ಹೊಕ್ಕಂತೆ
ತಕಧಿಮಿ ತಕಧಿಮಿ ಕುಣ ದಾಳೋ
ನಾಟ್ಯ ಗೌರಿಯೇ
ಶಿವೆಯಾಗಿ ಅವತರಿಸಿ
ಗಾಳಿ ತುಂಬೆಲ್ಲಾ ಧೀಂ ಧೀಂ
ಜೀವೋತ್ಕರ್ಷದ ಗೆಜ್ಜೆ ನಾದ
ಇಟ್ಟಿದ್ದು ಬರೀ ಹೆಜ್ಜೆಯಲ್ಲ
ಕಾಲರುದ್ರನ ಎದೆ ಬಡಿತಕ್ಕೆ
ಮರು ಜೀವಸಂಚಾರ...
ನಗೆ ನಗೆ ನಗು...
ಶಿವೆಯ ಕೊನೆಯಿಲ್ಲದ ಅಲೆ ಅಲೆ ನಗು
ಭೂಮಂಡಲವ ವ್ಯಾಪಿಸಿ
ಆ ನಗೆಯೊಳಗಿಂದಲೇ
ನೂರಾರು ಜೀವಂತ ಪಾತ್ರಗಳುದುರುತ್ತಿವೆ
ಎತ್ತಲೂ ಸುತ್ತಲೂ ಮುತ್ತಿನಂತೆ!
ಸ್ತಬ್ಧ ಇಳೆಗೇ
ಮತ್ತೀಗ ಜೀವ...
ಎಚ್ಚರಾಯಿತು ರುದ್ರನಿಗೂ!
ನೋಡುತ್ತಲೇ ಶಿವೆಯನ್ನು
ಅವಳ ನಗುವನ್ನು
ಬೆರಗಾಗಿ ನೋಡುತ್ತಾನೆ...
ತನ್ನ ಕಥೆಗಳಂತೆ
ಥಟ್ಟನೆ ಮುಟ್ಟಲಾಗದ
ಲಟಕ್ಕನೆ ಮುರಿಯಲಾಗದ
ಜೀವಂತ ಶಿವೆಯರನು!
- ರೂಪ ಹಾಸನ
ಪೊಟೋ ಕೃಪೆ : ಅಪೂರ್ವ ಸುರತ್ಕಲ್
ರೂಪ ಹಾಸನ
ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ) , ಕಡಲಿಗೆಷ್ಟೊಂದು ಬಾಗಿಲು, ಲಹರಿ , ಮಹಿಳೆ ಮತ್ತುಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ 2000 ಗೊರೂರು ಸಾಹಿತ್ಯ ಪ್ರತಿಷ್ಠಾನ, ಸುಶೀಲಾ ಎಸ್.ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, 2005, ಕಾವ್ಯಾನಂದ ಪ್ರಶಸ್ತಿ 2005, ಹಾ.ಮಾ.ನ. ಪ್ರಶಸ್ತಿ 2008 ಶಿವಮೊಗ್ಗ ಕರ್ನಾಟಕ ಸಂಘದಿಂದ ಪ್ರಶಸ್ತಿ ದೊರಕಿದೆ.
ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.
More About Author