Poem

ಇಲ್ಲೂ ಇದ್ದಾರೆಯೇ ಚೋರರು

ಚಿನ್ನ, ಹಣ, ವಸ್ತುಗಳ
ಕದಿಯುವ ಕಳ್ಳರಿದ್ದಾರೆ ಎಲ್ಲೆಡೆಗೆ
ಅವರ ಮಟ್ಟ ಹಾಕಲೆಂದು
ಪೊಲೀಸರೂ ಇದ್ದಾರೆ
ಸೊಂಟ ಮುರಿಯಲೆಂದು

ಆದರೂ ನಿಂತಿಲ್ಲ ಕಳ್ಳತನ
ಇದಕ್ಕೊಂದು ಹೊಸತನ
ಬರೆಹಗಳ ಚೋರರಿದ್ದಾರೆ ಅಲ್ಲಲ್ಲಿ
ಇಲ್ಲೂ ಇದ್ದಾರೆಯೇ..
ಒಮ್ಮೆ ಹೇಳಿ... ಏಕೆಂದರೆ..
ಶಿವರುದ್ರಪ್ಪನವರ ಕವನಕ್ಕೂ ಕನ್ನ..!!
ಹೇಸಿಗೆ ತಿನ್ನಲು ಹೇಸದ ಜನ.

ಏನು ಸಾಧನೆ ಮಾಡುವರಿವರು
ಸ್ವಂತಿಕೆ ಇಲ್ಲದ ಭಂಡರು
ನನಗೋ ಭಯ ಆವರಿಸಿದೆ ಈಗ
ಸಾಹಿತ್ಯ ಎಂದರೆ ಹೀಗಾ..
ಛೆ.. ಇರಬಹುದು ಕೆಲವು ಹುಳ
ಗೆದ್ದಲು ಹಾಳೆಯ ತಿಂದಂತೆ...
ಇಲ್ಲೂ ಇದ್ದಾರೆಯೇ...

ಒಪ್ಪಿಕೊಂಡು ಬಿಡಿ.. ಆಗಲಾರದು..
ತನಗೆ ತಾನೇ ಮಸಿ ಬಳಿಯುವುದೆಂತು..
ಹೋಗಲಿ.. ಬಿಡಿ... ಬದಲಾಗಿ..
ಸಾಕ್ಷಿ ಹೊರಬೀಳುವ ಮೊದಲು..
ಛಿ.. ಥು.. ಎಂದು ಉಗಿಯುವ ಮೊದಲು..
ಎಲ್ಲೆಡೆಗೂ ವಾರ್ತೆ ಹಬ್ಬುವ ಮೊದಲು..
ಇಲ್ಲೂ ಇದ್ದಾರೆಯೇ..

ಸಿಕ್ಕಿ ಬೀಳಲಾರೆ ಎಂದುಕೊಂಡರೆ..
ಅದು ದಡ್ಡತನ ಅಲ್ಲವೇನು..
ರವಿ ಕಾಣದ್ದನ್ನು ಕವಿ ಕಾಣುವ..
ಗಾದೆ ಮರೆತಿಲ್ಲ ತಾನೇ..
ಇಂದಲ್ಲ ನಾಳೆ, ಹರಾಜು ನಿಶ್ಚಿತ..
ಕಾಲ..ಸನ್ನಿಹಿತ.

ರುಜುವಾತಾಗಲಿ...
ಸಭ್ಯರಿಗೆ ಆಗಲೇ ಗೌರವ, ಸಮ್ಮಾನ.
ನಿಲ್ಲಬೇಕಿದೆ..
ಜೊಲ್ಲು, ಜೊಳ್ಳುಗಳ ನರ್ತನ..
ಇಲ್ಲೂ ಇದ್ದಾರೆಯೇ..
ಒಮ್ಮೆ ಹೇಳಿಬಿಡಿ... ಇಲ್ಲ... ಬದಲಾಗಿ ಬಿಡಿ.
ಕಾಲ ಉತ್ತರಿಸುವ ಮುನ್ನ.

- ಹರಿನರಸಿಂಹ ಉಪಾಧ್ಯಾಯ

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ.

ಬಿಡುಗಡೆಗೊಂಡ ಕವನ ಸಂಕಲನ : ಭಾವಶರಧಿ (2020)

2020 ರಲ್ಲಿ ನವಪರ್ವ ಫೌಂಡೇಶನ್ ನಿಂದ "ನವಪರ್ವ ಸವ್ಯಸಾಚಿ" ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯಿಂದ " ಚಂದನ ಸಾಹಿತ್ಯ ರತ್ನ" ಪ್ರಶಸ್ತಿ, 2021 ರ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ " ಬಸವಶ್ರೀ " ಪ್ರಶಸ್ತಿ.

More About Author