ಬಿಕಾರಿ ಬೆಳದಿಂಗಳು ಕತ್ತಲನ್ನು ಕದ್ದು ನೋಡುವ ಹೊತ್ತಿನ್ನು ಆಗಿರಲಿಲ್ಲ. ಎಷ್ಟೇ ಹಗುರ ಹೆಜ್ಜೆ ಹಾಕಿದರೂ ಗಡ್ಡಿ ಮೆಟ್ಟಿನ ಬುಡಕ್ಕೆ ಹೊಡಿಸಿದ್ದ ನಾಲುಗಳ ಕಟ್ ಕಟ್ ಸಪ್ಪಳ. ಬೆದರಿದ ಹೆಣ್ಣು ನಾಯೊಂದು ‘ಗವ್’ ಎಂದು ತೊಡೆಗೆ ಬಾಯಿ ಹಾಕಿತು. ಬೀಡಿಯ ಕಿಡಿ ಕೂತಿದ್ದ ದೋತಿಗೆ ತನ್ನ ಹಲ್ಲು ಸಿಕ್ಕಿಸಿ ಮತ್ತಷ್ಟು ಬೆತ್ತಲೆಗೊಳಿಸಿತು. ಎಡಗೈಯಲ್ಲಿದ್ದ ತೋಳದ ತೊಗಲಿನ ಢಮರು ಜಾರಿ ಬಿತ್ತು. ವಾಸನೆ ಹಿಡಿದ ಮತ್ತೆರಡು ಹಸಿ ತೊಡ್ಡು ಬೀಜದ ನಾಯಿಗಳು ಬಾಯಲ್ಲಿ ಹಿಡಿದು ಶತಮಾನದ ಸೇಡು ಎಂಬಂತೆ ಚೆಕ್ಕೆಂದು ತೆಗೆದು ಓಡಿದವು. ಎರಡೂ ಕೈಗಳನ್ನು ನೆಲಕ್ಕೂರಿ ಎದ್ದೆ. ಬಿಳಿ ಹೊಲಿಗೆಗಳು ಎದ್ದು ಕಾಣುವ ಕರಿ ಕೋಟನ್ನು ಬಿಚ್ಚಿ ಕುಂಡಿಗೆ ಮರಿಯಾದೆ ಮಾಂಡಿಕೊಂಡೆ. ಈ ಊರಲ್ಲಿ ಹೇಳಬೇಕಾದ್ದನ್ನು ಎಷ್ಟೇ ನೆನಪಿಸಿಕೊಂಡರೂ ಎದೆಯ ಜೋಳಿಗೆಯಿಂದ ಹೊರ ಬರಲೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ಮೈಯನ್ನು ನೋಡಿಕೊಂಡೆ. ಹೇಲು ಉಚ್ಚೆ ಕೆಸರು ಮೈಗೂದಲುಗಳÀಲ್ಲಿ ಸಿಕ್ಕಿಕೊಂಡಿದ್ದವು. ಎಲ್ಲಿದ್ದವೋ ಹಸಿರು ನೊಣಗಳು ಒಮ್ಮಿಲೆ ನುಗ್ಗಿ ಉಂಡೆ ಕಟ್ಟಿ ಹಿಂಗಾಲಿನಿಂದ ಒಯ್ಯಲು ಹವಣಿಸುತ್ತಿದ್ದವು. ಇದಕ್ಕೆಲ್ಲ ಕಾರಣ ಮೆಟ್ಟುಗಳಾದ್ದರಿಂದ ಅಲ್ಲಿಯೇ ಬಿಟ್ಟು ಬಿಟ್ಟೆ. ಹೊಟ್ಟೆಯ ಬುಡಕ್ಕೆ ಹುರಿ ಹೊಡೆದ ಮೊಲೆಯ ಹೊತ್ತ ನಾಯೊಂದು ಅವುಗಳನ್ನು ಬಾಯಲ್ಲಿ ಹಿಡಿದು ಕಿಸುಗಾಲಿನಗುಂಟ ಹೋಗುವುದನ್ನು ಮರೆಯಾಗುವವರೆಗೂ ನೋಡಿದೆ.
ಬೆದೆಗೆ ಬಂದ ಕಪ್ಪೆಗಳು ವಟ ವಟ ಹೊದರಿ ತಮ್ಮ ಸಂಗಾತಿಯನ್ನು ಕರೆಯಿತ್ತಿದ್ದವು. ಇನ್ನೂ ಕೆಲವು ಪರಾಗ ಸ್ಪರ್ಷಗೊಂಡು ಒಂದರ ಮೇಲೊಂದು ಮಲಗಿ ಲಾಗ ಹೊಡೆಯುತ್ತಿದ್ದವು. ಮತ್ತೆ ಕೆಲವು ತೇಕುತ್ತಾ ಕುತ್ತಿಗೆಯಲ್ಲಿ ತೆಗ್ಗು ತೆವರು ತೋರಿಸುತ್ತಾ ವಿರಹ ಒಂಟಿತನ ತೋರಿಸುತಿದ್ದವು. ಕೆಂಪಗಿದ್ದ ಚಂದಿರ ಇನ್ನೇನು ಬೆಳ್ಳಗಾಗುವುದರೊಳಗೆ ಈ ಊರು ಬಿಡಬೇಕೆಂದು ಹಿಂಬಡವು ಮೇಲೆತ್ತಿ ಹೆಬ್ಬೆಟ್ಟು ನೆಲಕ್ಕೊತ್ತಿ ಸರ ಸರನೆ ನಡೆಯುತ್ತಿದ್ದೆ. ಕಾಲೆಗೆ ಹಳೆಯ ಚಿಂದಿಯೊಂದು ಸಿಕ್ಕಾಕಿಕೊಂಡು ಬೊಕ್ಕುಬಾರಲೆ ಬಿದ್ದೆ. “ಬಲ ಕಡಿಮೆ ಆದಾಗ ನೆಲವೆದ್ದು ಬಡಿಯಿತಂತೆ” ದೊಡ್ಡವರು ಹೇಳಿದ ಮಾತು ಸತ್ಯವೆಂದು ಮನಸಿನೊಳಗೆ ಗುಣುಗುತ್ತಾ ಮತ್ತೆ ಬೆಳಕಿನ ಭಯವಾಗಿ ಬೆನ್ನಿಗೆ ಕಾಲಚ್ಚಿ ಓಡಿದೆ..
ಬಿದ್ದ ಹಾದಿಯಿಂದ ಇಲ್ಲಿಯವರೆಗು ಎಷ್ಟು ದೂರ ನಡೆದು ಬಂದೆ ಎನ್ನುವ ಖಬರು ನನಗಿರಲಿಲ್ಲ. ಗುಬ್ಬಿ ಬಳವು ಬುರ್ಲಿ ಕೌಜುಗಗಳ ಧ್ವನಿ ಕೇಳಿ ಹದವಾದ ನೆಲಕ್ಕೆ ನಿಂತು ಮುಗಿಲು ನೋಡಿದೆ. ಬೆಳ್ಳಿ ಚುಕ್ಕಿ ಕೂರಿಗೆ ತಾಳು ಮೂಡಿರುವುದನ್ನು ಕಂಡು ಬೆಳಕಾಗಿರುವುದನ್ನು ಖಾತರಿ ಮಾಡಿಕೊಂಡೆ. ನಡೆದು ನಡೆದು ಮೈ ಹೊಡಿದು ಹಾಕಿದಂತನಿಸಿ ಹತ್ತಿರ ಇರುವ ಹುಳಿ ಮಾವಿನ ಮರಕ್ಕೆ ಅಡ್ಡಾದೆ. ಕಟ್ಟು ಇರುವೆಗಳು ಮೈಮೇಲಿನ ಕೂದಲೊಳಗೆ ಹೊಕ್ಕು ಗುಳು ಗುಳು ಮಾಡಿದವು. ಕಟಗುಟಿಗೆ ಆಡಿಸಿದ ಹಾಗೆ ಅನಿಸಿ ನಿದ್ದೆ ಹತ್ತಲಿಲ್ಲ. ತಕ್ಷಣಕ್ಕೆ ಎದ್ದು ಕಿಸುಗಾಲು ಹಾಕಿ ಎರಡೂ ಕೈಯಿಂದ ಜಾಡಿಸಿಕೊಂಡೆ. ಅಷ್ಟೊತ್ತಿಗಾಗಲೇ ಕಣ್ಣು ಬೆಳಕು ಮೂಡಿ ಅನತಿ ದೂರದಲ್ಲಿ ಯಾರೋ ಕಂಡಂತಾಗಿ ಗಿಡದ ಬಡ್ಡಿಗೆ ಮರೆಯಾದೆ. ಸಾವಕಾಶವಾಗಿ ತಲೆಯೊಳಗಿನ ಜಡೆಗಳನ್ನು ಹಿಂದಕ್ಕೆ ಸರಸಿ ಎರಡೂ ಕೈಗಳನ್ನು ಬಡ್ಡಿಗೆ ಗಚ್ಚಿಯಾಗಿ ಹಿಡಿದು ಗೋಣು ಹೊರಳಿಸಿ ಒಂಟಿಗಣ್ಣಿಲೆ ನೋಡಿದೆ. ಬಹಳಷ್ಟು ಹೊತ್ತಿನವರೆಗು ನಿಂತಲ್ಲೆ ನಿಂತದ್ದನ್ನು ಮನಗಂಡು ಭಯ ಮಿಶ್ರಿತವಾಗಿಯೇ ಬಯಲಾದೆ. ಹಂದಿ ತೋಳ ನರಿಗಳು ಹೊಲಕ್ಕೆ ನುಗ್ಗದಿರಲೆಂದು ಅವುಗಳಿಗೆ ಹಂಜಿಸಲು ಎರಡು ಕಟ್ಟಿಗೆಗಳಿಗೆ ಬಿಳಿ ಬಟ್ಟೆ ತೊಡಿಸಿ ನಿಲ್ಲಿಸಿರುವುದನ್ನು ಖಾತ್ರಿ ಮಾಡಿಕೊಂಡು ಇಳಿಜಾಪುಗಳನ್ನು ಇಕ್ಕುತ್ತಾ ಹೋದೆ. ತೊಡಿಸಿದ್ದ ಬಟ್ಟೆಯನ್ನು ಬಿಚ್ಚಿ ಕೊರಳೊಳಗೆ ಹಾಕಿಕೊಂಡೆ. ಹಸಿವು ಹೆಚ್ಚಾಗಿ ಹೊಟ್ಟೆ ಬೆನ್ನಿಗೆ ಹತ್ತಿತ್ತು. ಏನಾದರು ಸಿಕ್ಕಿತೆಂಬ ಹುಂಬ ಭರವಸೆಯಿಂದ ಇಡೀ ಹೊಲವನ್ನು ಅಡ್ಡ್ಯಾಡಿ ಹುಡುಕಿ ಬೇಸರವಾಗಿ ನಿಂತ ಜಾಗದಲ್ಲಿಯೇ ನೆಲಕ್ಕೆ ಕುಂಡಿ ಹಚ್ಚಿ ಹೇದುಸಿರು ಬಿಟ್ಟೆ. ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಎರಡೂ ಕೈಗಳನ್ನು ಮುಷ್ಟಿಮಾಡಿ ಪಿಚ್ಚುಗಣ್ಣುಗಳನ್ನು ತಿಕ್ಕುತ್ತಾ ದಿಟ್ಟಿಸಿ ನೋಡಿದಾಗ ಹತ್ತಿಯ ಸಾಲೊಳಗೆ ಹತ್ತಿಪ್ಪತ್ತು ಕಗ್ಗು ತಮಾಟೆ ಹೊತ್ತ ಗಿಡವೊಂದು ಕಂಡಿತು. ಓಡ್ಹೋಗಿ ಎಲ್ಲವನ್ನು ಹರಿದು ಹೊಟ್ಟೆಗೆ ಹಣ್ಣು ಮಾಡಿಕೊಂಡು ಉಳಿದವು ಅರುವೆಯಲ್ಲಿ ಗಂಟು ಕಟ್ಟಿದೆ. ಪಕ್ಕದಲ್ಲಿ ಕಟ್ಟಡದ ಬಾವಿ ಕಂಡಿತು. ಅರಗುಟಿಗೆ ಆಗಿದ್ದ ಗಂಟಲನ್ನು ತಣ್ಣಗೆ ಮಾಡಿಕೊಂಡು ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಕಿಸುಗಾಲು ಹಾಕಿ ಒಂದೆರಡು ಕೊಳಕು ಹೂಸು ಬಿಟ್ಟೆ. ಮೈ ಹಗುರ ಆದಂತನಿಸಿ ಅಬ್ಬಾ! ನಾನೀಗ ಜಗತ್ತು ಗೆದ್ದೆ ಎನ್ನುವಷ್ಟು ಖುಷಿಯಾಯಿತು. ನಾಲ್ಕೆಂಟು ಹೆಜ್ಜೆ ಮುಂದಕ್ಕೋದಾಗ ನೀರು ಹರಿಯುತಿದ್ದ ಕವಲಿ ಅಡ್ಡಾಯಿತು. ಬೆತ್ತವನ್ನು ನೆಲಕ್ಕೂರಿ ಹಾರುವಾಗ ಹೆಣ್ಣು ತಂತಿಯ ಬೇಲಿ ಕಾಲಿಗೆ ಸಿಕ್ಕು ಬೊಕ್ಕುಬಾರಲೆ ಬಿದ್ದೆ. “ಬಾರದು ಬಪ್ಪದು ಬಪ್ಪದು ತಪ್ಪದು” ಎನ್ನುವ ಮಾತು ನೆನಪಾಗಿ ಸಮಧಾನ ಮಾಡಿಕೊಂಡು ಸುತ್ತ ಮುತ್ತಲು ನೋಡಿದೆ. ಯಾರೂ ಕಾಣಲಿಲ್ಲ. ಬಡ ಬಡ ಅರುವೆಗಳನ್ನು ಬಿಚ್ಚಿ ನೀರಲ್ಲಿ ಎದ್ದಿ ತೆಗೆದು ಎರಡು ಕೈಯಿಂದ ಹಿಂಡಿ ಜಾಡಿಸಿ ಹಾಕಿಕೊಂಡೆ. ಹೊಟ್ಟೆ ತುಂಬಿಸಿದ್ದ ಹೊಲಕ್ಕೆ ಮತ್ತೊಮ್ಮೆ ಹಿಂದಕ್ಕೆ ತಿರುಗಿ ಉಪಕಾರದ ಕೃತಜ್ಞತೆ ಸಲ್ಲಿಸಿ ನಡೆದೆ. ಮನುಷ್ಯರನ್ನು ಹೊರತು ಪಡಿಸಿ ಹುಳಾ ಉಪ್ಪಡಿಗಳ ಭಯವೇನೂ ಇರಲಿಲ್ಲ. ಸಣ್ಣದಾದ ಮೊಂಡೊಡ್ಡಿಗೆ ಹಾವಿನಂತೆ ತಳುಕು ಹಾಕಿದ್ದ ಹಳದಿ ಬಣ್ಣದ ದೊಡ್ಡದಾದ ಬಳ್ಳಿ ಕಂಡಿತು. ತನ್ನ ಕರುಳ ಬಳ್ಳಿಯನ್ನು ಕತ್ತರಿಸಿಕೊಂಡು ತನಗು ಬಳ್ಳಿಗೂ ಸಂಬಂಧವಿಲ್ಲವೆಂಬಂತೆ ಸೋರೆಕಾಯಿ ಬಿದ್ದಿತ್ತು. ಅದನ್ನು ಎತ್ತಿಕೊಂಡು ಹಿಂದಕ್ಕೆ ಬಂದೆ. ಎಡವಿ ಬಿದ್ದ ಜಾಗದಲ್ಲಿರುವ ಎರಡು ಮೊಳ ತಂತಿಯನ್ನು ಕಲ್ಲಿನಿಂದ ಕುಟ್ಟಿ ಕತ್ತರಿಸಿದೆ. ಕಂಬಕ್ಕೆ ಜಡಿದಿದ್ದ ಮೊಳೆಗಳನ್ನು ಚೂಪಾದ ಕಲ್ಲಿಂದ ಮೇಟಿ ಕಿತ್ತಿಕೊಂಡೆ. “ಇನ್ನೂ ಇಲ್ಲಿ ನಿಲ್ಲುವುದು ಬೇಡ; ಹೊಲದ ಮಾಲಿಕ ಬಂದರೆ ಪಜೀತಿ ಆದೀತೆಂದು ಅಲ್ಲಿಂದ ಕುಂಡಿಗೆ ಕಾಲಚ್ಚಿ ಓಡಿದೆ.
ಮೊಳಕಾಲಿನ ಚಿಣಿ ನೂಸುತ್ತಿದ್ದವು, ಅಬ್ಬಾ! ಆ ಹೊಲದವನು ನನ್ನ ಬೆನ್ನತ್ತಿ ಬರಲಾರನೆಂದು ಸಮಧಾನ ಮಾಡಿಕೊಂಡೆ; ಯಾಕಂದ್ರೆ ಸ್ವಲ್ಪ ದಾರಿ ನಡಿದರೆ ಅಷ್ಟು ಬೇಗ ಮೊಳಕಾಲುಗಳು ನೂಸುವುದಿಲ್ಲೆನ್ನುವುದು ಗೊತ್ತಿತ್ತು. ಮುಂದೆ ಬೆಟ್ಟ ಗುಡ್ಡಗಳು ಕಾಣಲಾರಂಭಿಸಿದವು. ಇಲ್ಲಿ ಮನುಷ್ಯರಾರೂ ಇರುವುದಿಲ್ಲವೆನ್ನುವುದು ಮನದಟ್ಟಾಯಿತು. ಖುಷಿ ಬಂದು ಕುಂಡೆಯೊಳಗೆ ಹೊಕ್ಕಂತಾಗಿ ಮೊಳಕಾಲುಗಳನು ಲೆಕ್ಕಿಸದೆ ಹಾರ್ಗಾಲು ಬಿದ್ದೆ. ದೊಡ್ಡದಾದ ಯಮಗಲ್ಲು ಅದರ ಪಕ್ಕ ಮರಿಗಲ್ಲು ಒಂದಕ್ಕೊಂದು ಹತ್ತಿದಂತೆ ಕಂಡರೂ ಹತ್ತಿರ ಹೋಗಿ ನೋಡಿದಾಗ ಗೇಣುದ್ದ ಅಂತರ ಕಾಯ್ದುಕೊಂಡಿದ್ದವು. ಕಲ್ಲಿನ ಪಡಿಯೊಳಗೆ ಕಿಸುಗಾಲು ಹಾಕಿ ಕೂತು ಜಾಲಿ ಮುಳ್ಳನ್ನು ಮುರಿದುಕೊಂಡು ಬೆತ್ತದ ಪಿಂಡಿನಷ್ಟು ಸೋರೆಕಾಯಿಯ ಹಿಂದೆ ಮುಂದೆ ಗುಂಡಗೆ ಗುರುತು ಮಾಡಿದೆ. ಎಡಗೈಯಲ್ಲಿ ಮೊಳೆ ಬಲಗೈಯಲ್ಲಿ ಹಿಡಿಗಲ್ಲು ಹಿಡಿದು ಸೀಳದಂತೆ ಸಾವಕಾಶವಾಗಿ ಕಟಿಯುತ್ತಿದ್ದೆ. ಬಾಜು ದಾಗಡ ಬಳ್ಳಿಯಲ್ಲಿ ಕೂತಿದ್ದ ಮೊಲವೊಂದು ಸಪ್ಪಳಕ್ಕೆ ಹೌಹಾರಿ ಓಡಿತು. ಎರಡೂ ಕಡೆ ತೂತು ಹಾಕಿ ಉಸಿರನ್ನು ಎಳೆದು ಧೂಳನ್ನು ಊದಿ ಅಳ್ಳಾಡಿಸಿದೆ. ಅರುವೆಯನ್ನು ನೆಲಕ್ಕೆ ಹಾಸಿ ಎರಡೂ ಕೈಯಿಂದ ಜಾಡಿಸಿದಾಗ ಬೊಗಸೆಯಷ್ಟು ಬೀಜಗಲು ಅರುವೆ ಮೇಲೆ ಬಿದ್ದವು. ಅದರ ಗೊಟ್ಟವನ್ನು ಮುಷ್ಟಿಯಲ್ಲಿ ಹಿಡಿದು ಇನ್ನೊಂದು ಕಡೆಯ ತುದಿಯಿಂದ ಗಂಟು ಕಟ್ಟಿಟ್ಟೆ. ಬೆತ್ತವನ್ನು ಮುಂದಿನ ತೂತಿನೊಳಗೆ ಹೊತ್ತಿ ಹಿಂದಿನ ತೂತಿನಿಂದ ಪಾರುಮಾಡಿ ಸೋರೆಕಾಯಿಯನ್ನು ಮಧ್ಯಕ್ಕೆ ಎಳೆದು ಬೆತ್ತದ ಎರಡೂ ತುದಿಗೆ ಸೀಳದಂತೆ ಎಚ್ಚರವಹಿಸಿ ಮೊಳೆಗಳನ್ನು ಜಡಿದೆ. ತಂತಿಯ ಸುರುಳಿಯನ್ನು ಬಿಚ್ಚಿ ಬಲಗಾಲಿನ ಹೆಬ್ಬಟ್ಟಿಗೆ ಸುತ್ತಿ ಎದ್ದು ನಿಂತು ಸೀದಾ ಮಾಡಿ ಎರಡೂ ಮೊಳೆಗಳಿಗೆ ಜಗ್ಗಿ ಕಟ್ಟಿದೆ. ಎಕ್ಕಿಯ ಹಾಲನ್ನು ಹುಡುಕಿ ತಂದು ಕಾಯಿ ಸರಿದಾಡದಂತೆ ಸಂದಿಗೆ ಜಿಗುಟು ಹಾಲನ್ನು ಮೆತ್ತಿ ಬಿಸಿಲಿಗೆ ಒಣಗಲು ಇಟ್ಟು ಬೀಜಳನ್ನೇ ತಲೆ ದಿಂಬುಮಾಡಿಕೊಂಡು ಅಡ್ಡಾದೆ.
ಸೂರ್ಯ ಮುಗಿಲಿನ ಹೊಟ್ಟೆ ಸೇರುವ ಹೊತ್ತನ್ನು ಆಗಿರಲಿಲ್ಲ. ಜೂನಿಗಳ ಸಪ್ಪಳ ಹೆಚ್ಚಾಯಿತು. ಒಣಗಿದ್ದ ಏಕತಾರಿಯನ್ನು ತಂದು ಕೂತಲ್ಲೆ ಅದರ ಕುಂಡಿಯನ್ನು ಎಡಗಾಲಿನ ಸಂದಿಯಲ್ಲಿ ಹಿಡಿದು ತೋರು ಬೆರಳಿನಿಂದ ಚಿಮ್ಮಿದಾಗ ಅದರ ನಾದ ಮತ್ತು ಮೈಮೇಲಿನ ಕೂದಲುಗಳು ಒಮ್ಮಿಲೆ ಏರಿ ನಿಧಾನವಾಗಿ ಇಳಿಯುತ್ತಿದ್ದವು. ಏಕತಾರಿಯ ನಾದಕ್ಕೋ ಅಥವಾ ಇಳಿ ಹೊತ್ತು ಆವರಿಸಿದ್ದಕ್ಕೋ ಏನೊ ಬೆದರಿ ಓಡಿದ್ದ ಮೊಲವೊಂದು ತನ್ನ ಮನಿಗೆ ಬರಲು ಹವಣಿಸುತ್ತಿತ್ತು. ಇನ್ನೂ ಇಲ್ಲಿರುವುದು ಬೇಡವೆಂದು ಎರಡೂ ಗಂಟುಗಳನ್ನು ಬಗಲಲ್ಲಿ ಬಡಿದುಕೊಂಡು ಹೊರಟೆ.
ಅಡವಿ ಅರ್ಯಾಣಗಳ ನಡುವೆ ಕಂಟಿ ಕಮರುಳನ್ನು ಹೋಳು ಮಾಡುತ್ತಾ ಚುಚ್ಚಿದ ಮುಳ್ಳುಗಳನ್ನು ಕಿತ್ತಿಕೊಳ್ಳುತ್ತಾ ನಡೆಯುತ್ತಿದ್ದೆ. ಇಳಿಜಾರನ್ನು ಏರಿ ಎತ್ತರದ ಡಾಂಬಾರು ರಸ್ಥೆಯನ್ನು ತಲುಪಿದೆ. ದಾರಿಯುದ್ದಕ್ಕೂ ದೊಡ್ಡ ಸಣ್ಣ ಅಡ್ಡ ಗಿಡ್ಡದಾದ ರಕ್ತದ ಕಲೆಯ ಹೆಜ್ಜೆಗಳು, ಅವುಗಳ ಮೇಲೆ ಮುಕ್ಕುರಿದ ನೊಣಗಳು ನೋಡಿ ಭಯವಾಯಿತು. ಇನ್ನಷ್ಟು ನೊಣಗಳು ನನ್ನ ತಲೆಯ ಮೇಲೆ ಆಡುತ್ತಿದ್ದವು. ಎಡಕ್ಕು ಬಾಗಿಸಿ ಬಲಗೈಯಿಂದ ಕೂದಲಿಗೆ ಪಟ ಪಟ ಹೊಡೆದುಕೊಂಡೆ. ಒಂದಷ್ಟು ಹೋದಂತೆ ಕಂಡ ನೋಣಗಳು ಮತ್ತೆ ಮುಕ್ಕುರಿದವು. ಅಂಗೈ ಮೂಗಿಗೆ ಒಯ್ದೆ ಕುದಿಗೆ ಕುಮ್ಮುಗೊಯ್ದ ಕೂದಲುಗಳು ಕಮಟು ವಾಸನೆ ಬರುತ್ತಿತ್ತು. ಪಾಡಲ್ಲದ ಮಾತೆಂದು ಏಕತಾರಿಯನು ಮೀಟಿ “ಹೆದ್ದಾರಿಗೆ ಹದ್ದು ಬಡಿಯಲೋ ಗುರುವೆ, ಕಾಲು ದಾರಿ ಕವಲೊಡಿಯಲೋ ತಂದೆ” ಹಾಡು ಹಾಡ್ತಾ ಅಡ್ಡದಾರಿಯ ಹಿಡಿದೆ.
ಮಿಂಚು ಹುಳುವೊಂದು ಎದೆಯ ಮೇಲೆ ಕುಳಿತು ಹಾರಿ ಹೋಗಲೇ ಇಲ್ಲ. ಅದನ್ನು ಎತ್ತಿ ಬೀಸಾಕುವ ಪ್ರಯತ್ನವೂ ಮಾಡಲಿಲ್ಲ. ಸಧ್ಯಕ್ಕೆ ಅಷ್ಟು ಬೆಳಕು ನನಗೆ ಸಾಕಾಗಿತ್ತು. ನಡೆದೆ... ನಡೆದೆ... ಬಾಯರಿಕೆ ಹಸಿವುಗಳು ದಾಳಿಮಾಡಿ ಶಕ್ತಿಯಲ್ಲಾ ಕುಂದಿಸಿದ್ದವು. ಗಂಟಿನೊಳಗಿಂದ ಎರಡು ಕಗ್ಗು ತಮಾಟೆಯನ್ನು ಬಿಚ್ಚಿ ಒಣಗಿದ್ದ ಗಂಟಲು ಹಸಿಮಾಡಿಕೊಂಡು ಮತ್ತೆ ನಡೆದೆ. ಅನತಿ ದೂರದಲ್ಲಿ ಬೆಳಕು ಕೋಲು ಮಿಂಚಿನಂತೆ ಹೊಡೆಯೀತು. ಹತ್ತಿರ ಹೋದಂತೆ ಮತ್ತೊಂದು ಸಾರಿ ಹೊಡೆದಾಗ ಹತ್ತಾರು ಮನೆಗಳ ಮುಂದೆ ಕೈಯಲ್ಲಿ ಬಡಿಗೆ ಹಿಡಿದ ದಾಂಡಿಗರು ಗಸ್ತು ತಿರುಗುವುದು ಕಂಡಿತು. ಇವರು ನನ್ನ ಉಳಿಸುವುದಿಲ್ಲವೆಂದು ದೊಡ್ಡದಾದ ತಿಪ್ಪೆಯನ್ನು ಏರಿ ಹೇಲಿಕೇರಿಯನ್ನು ಹೊಕ್ಕೆ. ಊರವರು ಬೂದಿ ಚೆಲ್ಲಿದ ಜಾಗವನ್ನು ಕೆದರಿ ಮನೆಮಾಡಿಕೊಂಡು ಮಲಗಿದ್ದ ಹಸಿ ಬಾಣಂತಿ ಹಂದಿಯೊಂದು ಕಿರ್ ಕಿರ್ ಹೊದರುತ್ತಿತ್ತು. ನಾನು ಅಲ್ಲಿಂದ ತುಸು ಹೋಳಾದಾಗ ತನ್ನ ಧ್ವನಿ ನಿಲ್ಲಿಸಿ ಎಡಕ್ಕು ನೆಲಕ್ಕಚ್ಚಿ ಕಣ್ಣುಮುಚ್ಚಿತು. ಮರಿಗಳು ಜೋಳಕ್ಕೆ ಮುಕ್ಕುವ ಬಾಲುಳಗಳಂತೆ ಒಂದರ ಮೇಲೊಂದು ಬಿದ್ದು ತಾಯಿಯ ಹೊಟ್ಟೆ ಹೀರುತ್ತಿದ್ದವು. ಮುಂದೆ ದೊಡ್ಡದಾದ ಹಾಳು ಹುಡೆಯೊಂದು ಕಂಡಿತು. ಹೆಗಲಿನಲ್ಲಿದ್ದ ಗಂಟನ್ನು ಬಿಚ್ಚಿ ಮುಷ್ಟಿಯಷ್ಟು ಬೀಜಗಳನ್ನು ಕೈಮುಂದಕ್ಕೆ ಮಾಡಿ ಉಗ್ಗಿಬಿಟ್ಟೆ. ಇನ್ನು ಇಲ್ಲಿದ್ದರೆ ಅಪಾಯವೆಂದು ಮುಳ್ಳು ಬೇಲಿಗಳನ್ನು ಹಾರಿ ನಾಲ್ಕಾಗ ಬೇಕಿದ್ದ ಹೆಜ್ಜೆಗಳನ್ನು ಎರಡು ಮಾಡಿ ಹೊರಟೆ.
ಸೂರ್ಯ ತಲಿ ಮ್ಯಾಲಿನ ಸುಳಿಗೆ ಬಂದು ಮಯ್ಯೆಲ್ಲಾ ಉರಿಯುತ್ತಿದ್ದರೂ ಖಬರು ಹಾರಿ ನಡೆಯುತ್ತಿದ್ದೆ. ತನ್ನ ಸೊಕ್ಕನ್ನು ಯಾವಾಗ ಮುರಿದುಕೊಳ್ಳುವನೋ ಎಂದು ಎಡಕೆತ್ತಿ ಮುಗಿಲು ನೋಡಿದೆ. ಕಣ್ಣಿಗೆ ಕತ್ತಲು ಕವಿದು ನೆಲ ತಿರುಗಿದಂತಾಗಿ ನಿಂತಲ್ಲೇ ಕುಂಡೂರಿ ಕಣ್ಣು ಮುಚ್ಚಿ
‘ಅಡ್ಡಡ್ಡ ಮಳೆ ಬರಲ್ಯೋ ನನ ಗುರುವ
ದೊಡ್ಡ ದೊಡ್ಡ ಕೆರೆ ತುಂಬಲ್ಯೋ ನನ ಕಾಸಿ
ದೊಡ್ಡ ದೊಡ್ಡ ಕೆರೆ ತುಂಬಲ್ಯೋ ನನ ಗುರುವ
ಗೊಡ್ಡೆಮ್ಮೆಗಳೆಲ್ಲಾ ಹೈನಾಗಲ್ಯೋ ನನ್ನಪ್ಪ’ ಎಂದು ಏಕತಾರಿಯ ತಂತಿಯ ತಿವಿಯುತ್ತಿದ್ದೆ. ನೀರು ಬರದ ಕಣ್ಣಿನ ಪಿಚ್ಚನ್ನು ಎರಡೂ ಕೈಯಿಂದ ತಿಕ್ಕಿಕೊಂಡು ಸಾವಕಾಶವಾಗಿ ಕಣ್ಣುಬಿಟ್ಟೆ. ನನ್ನ ಸುತ್ತಲು ಸುಟ್ಟ ಬದನೆಕಾಯಿಯಂತಾಗಿದ್ದ ಕರಿ ಮುಖದ ಜನರು ನೆರೆದಿದ್ದರು. ಮಾಸಿದ ಬಟ್ಟೆಗಳು, ಸಿಕ್ಕು ಹಿಡಿದ ಗುಂಗುರು ಕೂದಲುಗಳು, ಡೊಕ್ಕೆಯೊಳಗಿನ ಎಲವುಗಳು ಎದ್ದು ಕಾಣುತ್ತಿದ್ದವು. ಒಬ್ಬಳು ತನ್ನ ಕುಪ್ಪಸದ ಗುಂಡಿಗಳನ್ನು ಎಷ್ಟೇ ಜಗ್ಗಿ ಹಾಕಿದರೂ ಸೊಟ್ಟ ಮೊಲೆಗಳು ಜೋತು ಬೀಳುತ್ತಿದ್ದವು. ಹೊಕ್ಕಳದಲ್ಲಿದ್ದ ಕೂಸು ತನ್ನೆರಡು ಕೈಯಿಂದ ಜಗ್ಗಿ ಮೊಲೆ ಮೂಗಿಗೆ ಬಾಯಿ ಹಚ್ಚಿ ಹಾಲು ಬರದೇ ಅಳುತ್ತಿತ್ತು. ಇನ್ನೊಬ್ಬ ಹಣ್ಣಾದ ಮುದುಕಿಯ ಅಂಗಾಲಿಗೆ ಅರುವೆ ಕಟ್ಟುತ್ತಿದ್ದ. ಮಗದೊಂದು ಕೂಸು ಬೆವರು ಒಣಗಿ ಬಿಳಿ ನೊರೆಗಳು ಎದ್ದು ಕಾಣುತ್ತಿದ್ದ ಕುಪ್ಪಸಕ್ಕೆ ಬಾಯಿ ಹಚ್ಚಿ ನಗುತ್ತಿತ್ತು. ಎಲ್ಲೆಂದರಲ್ಲಿ ತಗಡಿನ ಸಂದೂಕುಗಳು ಅರುವೆಯ ಗಂಟುಗಳು. ಎಲ್ಲವನ್ನೂ ನೋಡಿ ನನ್ನ ಮೈ ನೋಡಿಕೊಂಡೆ. ಎಲ್ಲರು ನನ್ನನ್ನೇ ನೋಡುತ್ತಿರುವ ಭಾವ ತಿನ್ನಲಿಕ್ಕೆ ಏನಾದ್ರು ಇದ್ರೆ ಕೊಡು ಎನ್ನುವುದೇ ಹೇಳುತ್ತಿತ್ತು. ಗಂಟಿನೊಳಗಿನ ಕಗ್ಗು ತಮಾಟೆಗಳು ಬಿಸಿಲಿಗೆ ಕುದ್ದು ಹಳದಿ ಬಣ್ಣಕ್ಕೆ ತಿರುಗಿದ್ದವು. ಇನ್ನೊಂದು ಗಂಟಿನೊಳಗಿದ್ದ ಸೋರೆ ಬೀಜಗಳನ್ನು ಹೊರ ತೆಗೆದು ಮುಂದಿಟ್ಟುಬಿಟ್ಟೆ. ಮತ್ತೆ ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ತಮಾಟೆಗಳನ್ನು ನೋಡಿದ ಹುಡಗನೊಬ್ಬ ಕೈ ಹಾಕಿದಾಗ ಎಲ್ರೂ ನಾ ನೀ ಎಂದು ಜಗ್ಗಾಡಿದರು. ಒಬ್ಬ ತಮಾಟೆಯನ್ನು ತನ್ನ ಹಲ್ಲೊಳಗೆ ಸಣ್ಣಮಾಡಿ ಹೊರ ತೆಗೆದು ಮುದುಕಿಗೆ ಕೊಡುತ್ತಿದ್ದ. ಮತ್ತೊಬ್ಬಳು ಒಂದರಲ್ಲಿ ನಾಲ್ಕು ಮಾಡಿ ಮಕ್ಕಳಿಗೆ ಹಂಚುತ್ತಿದ್ದಳು. ಕೆಲವರು ಬೀಜಗಳನ್ನು ಕಡಿದು ಕಹಿ ಎನಿಸಿ ಕಗ್ಗು ಮಾರಿಗುಂಟ ನುಂಗುತ್ತಿದ್ದರು. ಏಕತಾರಿಯನ್ನು ಕೈಯಲ್ಲಿ ಹಿಡಿದು
‘ಜಗದ ನೋವುಗಳೆಲ್ಲಾ ಒಂದಾಗುವ ಕಾಲ
ಎಲ್ಲಿಗೊಂಟಿರೇ ತಾಯಿ ಯಾಕ ಹೊಂಟಿರೇ
ಹಾಕ ಬರ್ಯಾ ತಾಳ ಮೀಟಿ ತಗಿತೀನಿ ನಾದ’
ಎಂದು ಸುರು ಮಾಡಿದೆ. ಎಲ್ಲರೂ ಚಪ್ಪಾಳೆಯೊಂದಿಗೆ ಹಿಂದೆ ಹಾಡಿದರು. ಮತ್ತೊಮ್ಮೆ ಹಾಡಿದಾಗ ಪೆಟ್ಟಿನಲ್ಲಿದ್ದ ಧ್ವನಿ ಏರಿಸಿದರು. ಯುವಕರು ಎದ್ದು ನಿಂತು ‘ಜಗದ ನೋವುಗಳೆಲ್ಲಾ ಒಂದಾಗುವ ಕಾಲ’ ಎಂದು ಧ್ವನಿಯನ್ನು ತುಸು ಜೋರು ಮಾಡಿದರು. ಕೂತವರ ಮೈಮೇಲಿನ ಕೂದಲುಗಳು ನಿಮುರಿ ನೆಲಕ್ಕೆ ಕೈ ವೂರಿ ಏಳಲು ಹವಣಿಸುತ್ತಿದ್ದರು. ವಯಸ್ಸಾಗಿದ್ದ ಕೆಲವರಿಗೆ ಏಳಲು ಆಗದೆ ಅರ್ಧಕ್ಕೆ ಎದ್ದು ಬೀಳುತ್ತಿದ್ದರು. ರಭಸವಾಗಿ ಬಂದ ಉದ್ದನೆಯ ಕಾರು ತನ್ನ ಮೂಗು ನೆಲಕ್ಕೊತ್ತಿ ಕುಂಡಿ ತುಸು ಮೇಲೆತ್ತಿ ಅಳುಗಾಡಿ ನಿಂತಿತು. ಸರಕ್ಕನೆ ಬಾಗಿಲು ತಗೆದು ಹೊರಬಂದ ಮುಸುಕುದಾರಿಯೊಬ್ಬ “ಹೆ ಮಾದರ್ ಚೋದ್ ಕೋಣ್ ತಾ ಗಾಂವ್ ತುಮ್ಚಾ? ಎದೆ ಉಬ್ಬಿಸಿ ಏರು ಧ್ವನಿಯಲ್ಲಿ ಕೇಳಿದ. ಮುಡ್ಡಿ ಚಾಟಿ ತೊಟ್ಟಿದ್ದ ಒಬ್ಬ ಎದ್ದು ನಿಂತು ತನ್ನೆರಡೂ ಕಾಲುಗಳನ್ನು ಜೋಡಿಸಿ ಕಿರುದೊಡೆಗಳನ್ನು ಡೊಂಕುಮಾಡಿ “ಅಮ್ಚಾ ಗಾಂವ್ ಊರ ಹೆಸರನ್ನು ತೊದಲುತ್ತಾ ಅಯ್ ಓ ಭಾವ” ಎಂದು ಬೆನ್ನು ಬಾಗಿಸಿ ಹೇಳಿದ. ಇನ್ನೊಬ್ಬ ಮುಸುಕುದಾರಿ ಓಡಿ ಬಂದು “ಹೆ ರಾಂಡಿಚೆನ್ ಇತ್ತ ಕಾ ಬಸ್ಲೊ?? ಪಳಾ ಪಳಾ ಆಯಿ ಗಾಲೆನೊ” ಎಂದು ನಿಂತಿದ್ದವನ ಬೆನ್ನಿಗೆ ಒದ್ದ. ಮತ್ತಿಬ್ಬರು ಓಡಿ ಬಂದು ಹೊಡೆಯಲು ಪ್ರಾರಂಭಿಸಿದರು. ಜನರು ಮಳೆ ಹುಳುಗಳಂತೆ ಒಬ್ಬರ ಮೇಲೊಬ್ಬರು ಬಿದ್ದು “ಬಿಡ್ರಿ ಸಾಹೇಬ್ರ” ಎಂದು ಕೈ ಮುಗಿತಿದ್ರು. ಸಣ್ಣ ಮಕ್ಕಳು ಉಚ್ಚೆ ಹೊಯ್ಕೊಂಡು ಕೈ ಜಾಡಿಸುತ್ತಾ ತಮ್ಮ ಹೆತ್ತವರನ್ನು ಹುಡುಕುತ್ತಿದ್ದವು. ಬಸುರೆಯೊಬ್ಬಳ ಹೆರಿಗೆಯಾಗಿ ಉಚ್ಚೆ ಬುಡ್ಡಿ ಒಡೆದು ತಿಳಿ ರಕ್ತ ಹರಿಯಿತು. ಮತ್ತೊಬ್ಬ ಬಡಿಗೆ ಬೀಸಿದಾಗ ನನ್ನ ಮುಖಕ್ಕೆ ಬಡೆದು ಮೂಗುಚ್ಚಿ ರಕ್ತ ಸೋರಲಾರಂಭಿಸಿತು. ರಕ್ತ ಉಚ್ಚೆ ಕೂಡಿ ಹರಿಯುತ್ತಿದ್ದಂತೆ ಮುಸುಕುದಾರಿಗಳು ಕಾರೊಳಗೆ ಕೂತು ಸರಕ್ಕನೆ ಬಾಗಿಲು ಬಡೆದುಕೊಂಡು ಹೋದರು. ಬಾಣಂತಿಯು ತನ್ನ ಕೂಸನ್ನು ಕೈಯಲ್ಲಿ ಹಿಡಿದು ಎದ್ದಳು. ಎಷ್ಟೇ ಓಡಿಸಿದರೂ ಕತ್ತರಿಸದೇ ಇದ್ದ ಹೊಕ್ಕಳ ಬಳ್ಳಿಯ ವಾಸನೆ ಹಿಡಿದ ನೊಣಗಳು ಹಿಂಡು ಹಿಂಡಾಗಿ ಮುಕ್ಕಲಾರಂಭಿಸಿದವು. ಎಲ್ಲರೂ ಒಂದುಗೂಡಿ ಕಾಲುದಾರಿ ತುಳಿಯುತ್ತಿದ್ದಾಗ ಬೆಳ್ಳಗಿದ್ದ ಸೂರ್ಯ ಮತ್ತಷ್ಟು ಕೆಂಪೇರುತ್ತಿದ್ದ. ಏಕತಾರಿ ಹಿಡಿದ ನಾನು
‘ನಾಳೆ ಬೆಳಿಗ್ಗೆ ಐತಿ ಮಾಹಾ ಮರಣ
ಶರಣಂತಾವ ನಮ್ಮ ಪಂಚ ಹರಣ’ ಹಾಡಿದಾಗ ನನ್ನ ಬಾಯಿಂದ ಹಾಡು ಕಸಿದುಕೊಂಡ ಒಬ್ಬ
‘ಎಂದಾದರೊಂದು ದಿನ ನಮ್ಮ ಗೋರಿ ದಿನ್ನಿಮ್ಯಾಲ
ಅರಳಿತು ಒಂದು ಸಾದ ಹೂ..
ಅರಲಿತು ಒಂದು ಸಾದ ಹೂ ನಮ್ಮೊಡಿಯ
ಭೃಂಗನಾಗೋ ನೀ’ ಎಂದು ಹಾಡುತ್ತಿದ್ದ. ಅಷ್ಟೊತ್ತಿಗೆ ಕಣ್ಣು ನಸುಕಾಗಿ ಕತ್ತಲು ಏರಿ ಬರುತ್ತಿತ್ತು. ಮೈಮೇಲಿದ್ದ ನೊಣಗಳು ಇಳಿದು ಹೋಗಿತ್ತಿದ್ದವು.
ಕಲಾಕೃತಿ : ಕಂದನ್ ಜಿ. ಮಂಗಳೂರು
ಸಂಗನಗೌಡ ಹಿರೇಗೌಡ
ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ
More About Author