Poem

ಬೆಳದಿಂಗಳು

ಈಗಷ್ಟೇ ಅಮ್ಮೀ ಕುಡಿದು
ತುಟಿ ತುಂಬಾ ಹಾಲುನೊರೆ ಸವರಿಕೊಂಡು
ಪಿಸುನಗುವ ಮಗುವಂತೆ ಈ ಬೆಳದಿಂಗಳು
ಗಂಡನುಜ್ವಲಿಸಿ ಕೊಟ್ಟ ಪ್ರೀತಿ ಅಗ್ಗಿಷ್ಟಿಕೆಯ
ಬೆಳಕು ಬೆಳದಿಂಗಳಲ್ಲಿ
ಸಿಡಿಸಿಡಿದು ಬರುವ ಕಿಡಿಯ ಚಿತ್ರಗಳಂತೆ
ಬಾನಿನಲ್ಲಿ ಹರಡಿರುವ ಚುಕ್ಕೆಗಳು
ಮುಗಿಸಿ ರಾತ್ರಿಯ ಊಟ
ತೊಳೆದಿಟ್ಟು ಪಾತ್ರೆ ಪಗಡಗಳ
ಹಾಸಿಗೆಯ ಸರಿಪಡಿಸುವಾಗ
ತಟ್ಟನೆ ನೆನಪಾದ ಹೂಟಕೂಟಗಳು
ಹಣೆ ಗಲ್ಲ ಎದೆ ಮೇಲೆ ಬೆವರು ಹನಿಯಾದಂತೆ
ಆಕಾಶದಲ್ಲಿ ಚದುರಿ ಮೆಲುನಗುವ ಮೋಡಗಳು
ನಿಚ್ಚಳದ ನಿದ್ದೆಯಂಗಳದಲ್ಲಿ
ಮಗ್ಗುಲವ ತಾನೇ ಹೊರಳಿಸಿದ ಅಬ್ಬರಕೆ
ನಿಬ್ಬೆರಗಾಗಿ ನನ್ನ ಕಂದನ ಕಣ್ಣು
ಒಂದೇ ಸಮ ಪಿಳಿಪಿಳಿಗುಟ್ಟಿದಂತೆ ತಂಗಾಳಿ
ನನ್ನವನ ಕಣ್ಣ ಪಕಳೆಗಳ ಅಟ್ಟಾಲೆ ಏರಿ
ಹುಬ್ಬಿನಂದುಗೆ ಕಿಲಕಿಲನೆ ಬಾರಿಸುವ
ಅತ್ತೊಮ್ಮೆ ಇತ್ತೊಮ್ಮೆ ತೊನೆದು ಸೂಸುತ್ತಿರುವ
ಎಳೆಎಳೆಯ ತಿಳಿಬಾಳೆ ಎಲೆಗಳು
ತೆಳುವಾದ ಕಿಬ್ಬೊಟ್ಟೆ ನೀಲಿ ಆಕಾಶ
ಸ್ನಿಗ್ಧ ನಗೆ ಮುಗ್ಧ ಹಾಸಗಳು
ಅಲ್ಲಲ್ಲಿ ಕುಕಿಲುವ ಹಕ್ಕಿಗಳು
ನನ್ನ ಕೋಣೆಯನ್ನು ಸಿಂಗಾರಗೊಳಿಸಿರುವ
ನಿಶ್ಚಿಂತೆ ನಲಿವುಗಳು
ಈ ನಿಸರ್ಗದ ತುಂಬಾ ಸುಳಿವ ಉಲಿವುಗಳು

ನಾ ಪ್ರಕೃತಿ
ನನ್ನ ಮಗ್ಗುಲಲ್ಲಿ ಚೆಲುವ ಚಂದ್ರಾಮ
ಕೂಸಿನ ತುಟಿಗೆ ಅಂಟಿದೆ
ನಮ್ಮ ನಂಟಿನ ಅಂಟು ಬೆಳದಿಂಗಳು.

- ಹೇಮಾ ಪಟ್ಟಣಶೆಟ್ಟಿ

ಹೇಮಾ ಪಟ್ಟಣಶೆಟ್ಟಿ

ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. 

ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ಸಾಹಿತ್ಯ ಪತ್ರಿಕೆ ಸಂಪಾದಕರಾಗಿದ್ದರು. 

More About Author